ಜೋಕುಮಾರ ಸ್ವಾಮಿ (ನಾಟಕ) : ಅರ್ಪಣೆ
ಈ ನಾಟಕ ಬರೆಯುವುದಕ್ಕೆ,
ಪ್ರದರ್ಶನಕ್ಕೆ ಮತ್ತು ಪ್ರಕಟನೆಗೆ
ಕಾರಣರಾದ
ವೈಎನ್ಕೆ, ಕಾರಂತ, ಗಿರೀಶ್
ಲಂಕೇಶ್, ಶಂಕರಪ್ಪ-
ಇವರಿಗೆ,
ಮತ್ತು
ಎಂಟನೆಯ ಆವೃತ್ತಿ
ಹೊರತರುತ್ತಿರುವ ’ಅಂಕಿತ ಪುಸ್ತಕ’ದ
ಪ್ರಕಾಶ್ ಕಂಬತ್ತಳ್ಳಿ, ಹಾಗೂ
ಅಂದವಾಗಿ ಮುದ್ರಿಸಿದ ಸ್ವ್ಯಾನ್
ಕೃಷ್ಣಮೂರ್ತಿ
ಇವರಿಗೆಲ್ಲಾ ಕೃತಜ್ಞನಾಗಿದ್ದೇನೆ.
– ಚಂದ್ರಶೇಖರ ಕಂಬಾರ
ಜೋಕುಮಾರ ಸ್ವಾಮಿ (ನಾಟಕ) :
ಅಭಿಪ್ರಾಯ
ಕಂಬಾರರ ನಾಟಕಗಳಿಗೆ ಸಮರ್ಥ ಭಾಷೆಯ ಜೊತೆಗೆ ಧ್ವನಿಪೂರ್ಣವಾದ
ಕ್ರಿಯೆಯ ಬೆನ್ನೆಲುಬೂ ಇರುತ್ತದೆ… ಅವರ ನಾಕಟಗಳನ್ನು ಓದುವಾಗ ಕೂಡ
ಅವುಗಳ ಆಂತರಿಕ ಕ್ರಿಯೆ ತಾನಾಗಿಯೇ ಕಣ್ಣಿಗೆ ಕಟ್ಟುತ್ತದೆ.
– ಗಿರೀಶ ಕಾರ್ನಾಡ
ಶ್ರೀ ಕಂಬಾರರ “ಜೋಕುಮಾರಸ್ವಾಮಿ” ಬಯಲಾಟ; ಸಮಕಾಲೀನ ವಸ್ತುವಾದ
ಉಳುವವನೇ ನೆಲದ ಒಡೆಯ ಎಂಬ ವಸ್ತುವನ್ನು ತೆಗೆದುಕೊಂಡು ಅದನ್ನು
ಲೈಂಗಿಕ ಫಲವಂತಿಕೆಯೊಂದಿಗೆ ಹೊಂದಿಸಿ ಈ ನಾಟಕ ಕಟ್ಟಲಾಗಿದೆ. ಇಂಥ
ವಸ್ತು ವಾದ ಮತ್ತು ಕ್ರಿಯೆ ಎರಡನ್ನೂ ಪಡೆಯಬಲ್ಲುದು; ಮಾತು ಮತ್ತು
ಆಚರಣೆ ಎರಡನ್ನೂ ಒಳಗೊಳ್ಳಬಲ್ಲುದು. ಆದ್ದರಿಂದಲೇ ಈ ಕೃತಿಯಲ್ಲಿ ಮಾತು
ಮತ್ತು ಹಾಡು, ಪೂಜೆ ಮತ್ತು ನೃತ್ಯ ಹೊಂದಿಕೊಂಡಿವೆ. ಒಂದರ ಪರಿಣಾಮ,
ಇನ್ನೊಂದಕ್ಕೆ ನೆರವಾಗುತ್ತದೆ. ಬಯಲಾಟದ ಮೇಳ, ಮಾತು,
ಕುಣಿತಗಳನ್ನುಳ್ಳ ಈ ಕೃತಿ ನಿರ್ದೇಶಕನನ್ನು ನಮ್ಮ ಜಾನಪದ ಪರಂಪರೆಯ
ಶೋಧನೆಗೆ ತೊಡಗಿಸುವಂತೆಯೇ, ಪ್ರೇಕ್ಷಕ ತನ್ನ ಬದುಕಿನ ಮುಖ್ಯ
ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡುತ್ತದೆ.
– ಪಿ.ಲಂಕೇಶ್
ಜೋಕುಮಾರಸ್ವಾಮಿ ಜಾನಪದ ರಂಗಭೂಮಿಯ ಪರಿಕರಗಳನ್ನು ಅಳವಡಿಸಿಕೊಂಡು
ಸೃಷ್ಟಿಯಾದ ಒಂದು ರೋಮಾಂಚಕಾರಿ ಆಧುನಿಕ ನಾಟಕ. ಅದು ಮೊದಲ ಬಾರಿಗೆ
ರವೀಂದ್ರ ಕಲಾಕ್ಷೇತ್ರದ ಬಯಲು ರಂಗಭೂಮಿಯ ಮೇಲೆ ಪ್ರತ್ಯಕ್ಷವಾದಾಗ
ಅದರ ಮಾಂತ್ರಿಕ ಶಕ್ತಿಗೆ ನಾನು ದಂಗು ಬಡಿದುಹೋದೆ. ಅದರ ಮನಮೋಹಕ
ಸಂಗೀತ. ಕಣ್ಣು ತಣಿಸುವ ಧೀರತೇಜಸ್ಸಿನಿಂದ ಕೂಡಿದ ದೃಶ್ಯಭಾಗಗಳು ಈಗಲೂ
ನನ್ನ ನೆನಪಿನಲ್ಲಿ ಹಚ್ಚಹಸುರಾಗಿವೆ. ಕಣ್ಣು ಕಿವಿಗಳ ಮೇಲೆ ಏನೆಲ್ಲ
ದಾಳಿ ನಡೆಯುತ್ತಿರುವ ಈ ದಿನಗಳಲ್ಲಿ ಸಹ ಇವನ್ನು ನೆನದಾಗ ನಾನು
ಪರವಶನಾಗುತೇನೆ.
–ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಉತ್ತರ ಕರ್ನಾಟಕದ ಬಯಲಾಟದಂತಿರುವ ’ಜೋಕುಮಾರ ಸ್ವಾಮಿ’
ಬೆಂಗಳೂರಿಗರಿಗೆ ದೊರೆತಂಥ ಮತ್ತೊಂದು ರಸಕವಳ. ’ಸಮೃದ್ಧಿ ದೇವರಾ’ದ
’ಜೋಕುಮಾರ ಸ್ವಾಮಿ’ಯ ಈ ಆನಂದೋದ್ರೇಕದ ನಾಟಕ ಗೌಡ, ಬಂಜೆಯಾದ ಗೌಡತಿ,
ಹೊಲದ ಬಸಣ್ಣ, ಊರಿನ ಸೂಳೆ, ಚೆಲುವೆ ಹೆಣ್ಣು ನಿಂಗಿ ಇವರುಗಳ ನಡುವೆ
ಹೆಣೆದ ಪ್ರಸಂಗ. ಉಳುವವನೆ ಹೊಲದೊಡೆಯ ಆದರೆ ಪ್ರೀತಿ ಇದ್ದವನೇ ಗಂಡ
ಏಕಾಗಬಾರದು ಎಂಬ ಪ್ರತಿ ಪ್ರಶ್ನೆ ಕೇಳಿರುವ ಈ ನಾಟಕದಲ್ಲಿ
ಸೂತ್ರಧಾರನಾಗಿ ಕಂಬಾರ, ಮೇಳದವನಾಗಿ ಬಿ.ವಿ.ಸೇರಿದ್ದು
ಹಾಡು, ಚುರುಕು
ಸಂಭಾಷೆಗಳ ಸುಗ್ಗಿ ಸುಗ್ಗಿಯಾಗಿತ್ತು. ’ಡಂ ಡಂ’ ದೇವರ ನೆರವಿನಿಂದ ಹೊಲ
ಹೆಣ್ಣುಗಳನ್ನು ತನ್ನದು ಮಾಡಿಕೊಳ್ಳುತ್ತಿದ್ದ ಗೌಡನ ಪಾತ್ರದಲ್ಲಿ
ಗಿರೀಶ್ ಕಾರ್ನಾಡರ ಉತ್ತಮ ಅಭಿನಯ ನಾಟಕದ ಸ್ವಾರಸ್ಯ ಹೆಚ್ಚಿಸಿತು
– ಪ್ರಜಾವಾಣಿ (೨೦ ಫೆಬ್ರವರಿ ೧೯೭೨)
Here is a play in modern times cast in an ancient mould. The
form chosen by the dramatist is the Bayalaata – a kind of
folkplay which has been in vogue in Karnataka for centuries.
This is a form with an oral tradition, and, as Dr. Kambar himself
has said in a paper, begins in worship and ends in worship.
Jokumara is a deity who is associated with fertility in folklore.
He is represented as lusting after women and losing hi life as a
result. The stories connected with him have been variously
interpreted; they are probably mythic representations of the
seed sprouting.
Two things seem to me remarkable about Dr. Kambar’s work –
the first, that he has successfully cast into an old mould the
modern rejection of feudalism, and the second that the play
communicates the joy of love and life, while presenting vividly
exploitation and sterile tyranny. Indeed, the play ends tragically
with the death of the young and brave Basanna, and yet the
play communicates the loveliness and joy of life.
Like the classical Bayalaata, ‘Jokumaraswamy’ presents the
timeless conflict between good and evil. The Gowda represents
Evil, Basanna and the Gowdithi (the Gowda’s wife) represent
Goodness. But the dramatist has carried the symbolism a step
further, and this has the effect of deepening the significance of
the fable. Evil is associated with sterility and goodness with
fertility. The Gowda is the ruthless tyrant, who lends money
only to ruin the simple folk, and even gets people murdered for
the sake of their land. And his boast of conquests in endless
and shameless; yet he is impotent, and all his boast is meant
only to cover this defect. His wife yearns for a child, but it is
only Basanna who can fulfill her desire. So the frame of the
story of the God of Fertility is related to the story of the
mortals. The first part of the play narrates the story of
Jokumaraswamy, and thus foreshadows the tragic end. But folk
art is generally full of vigour and is characterized by faith in the
victory of the forces of life, and the defeat of the forces of
destruction. Ii is characterized by a robust acceptance of life. In
‘Jokumaraswamy’, Basanna is killed, but the Gowdithi – who
also stands for the acceptance of the joys of life – carries his
child in her womb. Also, Feudalism gets associated with
sterility, and the independent farmer with plenty. Secondly, the
play succeeds in asserting in terms of drama (and not merely
by symbolism) the essential worth and beauty of life. The story
of Jokumaraswamy narrated at the beginning by the Sutradhara
and the Himmela is neither a happy nor an edifying tale. But
the content itself gets balanced against the tone – the tone of
bantering and of enjoyed suggestions of obscenity. The
liveliness and the banter take away the sting of the story itself.
The story of the rustic mortals does not gloss over the evil and
suffering in life. The Gowda is never absent from our minds
even when he is not physically present, for the dialogue returns
to him time and again, and, because of the first dramatic entry
he makes, he is for every associated with the gun in our minds.
So the presence of evil and destruction is felt throughout the
play. And Gurya is tormented and humiliated, and the Gowdithi
ill – treated in the course of the action. Basanna dies and the
Gowdithi has to flee for her life, and that of the child in her
womb. But song and dance and lively dialogue create and
atmosphere of joy and activity. The thrust of poetry, music and
dance makes itself felt. The prostitute of the village is skillfully
drawn into the action, and in a sense identified with the
Gowdithi in her desire for children and the worship of
Jokumaraswamy. A feature of the play which merits comment is
its power of fixing a character in the mind by means of simple
visually rendered situations-as, for example, the entrance of
the Gowda with a gun borne before him, or of Gurya squatting
and bending to serve as seat for the traant.
The fight for the land and the flight for the woman are united
significantly, and word, spectacle, music and dance blend to
embody the joy of life, the sterility of Evil and the glad renewal
of the Good.
– L.S. Sheshagiri Rao
Delightful Kannada Drama
Chandrasekhar Kambar’s Kannada play “Jokumaraswamy”
presented today as part of the Sangeet Natak Academi’s
theatre festival at Kamani Auditorium is a fascinating and
delightful folk drama. The engrossing theatre traditions of rural
folk of the North Kannada region of Mysore come alive in this
modern play cast in the mould of the region’s Bayalata form.
The show can be called a ballet or a pantomime or a dance-
drama or a musical play or a purposeful contemporary play
because it has many ingredients of all these forms. People sing
in tune and swing in rhythm to portray and kind of emotion.
The popular slogan ’tiller is the owner of the land’ is given an
ironic delineation through a clever interpretation of ‘Sexual
fruitfulness’. Feudal atrocities and the inescapable results of
protest are presented through a blending of words and music,
dance and worship……… Right from the ritualistic invocation till
the draw of curtains it is a superb display of histrionics marked
by wit, reparte, argument and action.
– The Time of Inida
December 30, 1972
Chandrasekhar Kambar’s Kannada folk play ‘Jokumaraswamy’
was one of the most exciting presented during the Akademi
Theatre Festival at the Kamani Auditorium last week. Within the
North Karnataka region’s folk form. Bayalata, the director has
incorporated a variety of stylistic techniques ranging from the
Tamasha of Maharastra to Brechtian alionation, where is music,
dance, mime and prose dialogue is used in a manner which
makes the play essentially modern without in any way
detracting from its rustic verve. Through the symbol of sexual
fertility the theme reveals a very real social problem of
property and ownership : does the tiller own the land or the
landlord.
– Kavita Nagpal
The Hindustan Times
January 2, 1973
ಕಂಬಾರರು ಕನ್ನಡದ ರಂಗಭೂಮಿಗೆ ಮಳೆ ತಂದ ಋಷ್ಯಶೃಂಗರು. ಹಾಡುಗಳೆಂದರೆ
ಕಂಪನಿ ಹಾಡುಗಳೆಂದು ಮಾತ್ರ ಅರ್ಥವಿದ್ದಾಗ ಮೊಟ್ಟಮೊದಲಿಗೆ
’ತೊಡಗಿಸುವ’ ’ಗತ್ಯಾತ್ಮಕ’ ಹಾಡುಗಳ ನಾಟಕ ಬರೆದ ಕಂಬಾರರ ಕವಿ
ಸಾಮರ್ಥ್ಯದ ಬಗ್ಗೆ ನನಗಂತೂ ತುಂಬಾ ಗೌರವ, ಭಯ, ಅಸೂಯೆ. ನಮ್ಮಲ್ಲಿ
ನಾಟಕಕಾರ ಮತ್ತೆ ಕವಿಯೆನಿಸಿಕೊಂಡಿದ್ದಾನೆ ಕಂಬಾರರ ಮೂಲಕ. ಅವರ
ಜೋಕುಮಾರಸ್ವಾಮಿಯನ್ನು ನಾನು ಹುಡುಕಿದೆನೋ ಅಥವಾ ಜೋಕುಮಾರಸ್ವಾಮಿ
ನನ್ನನ್ನು ಹುಡುಕಿದನೋ-ನನಗಂತೂ ಅದರ ಪ್ರಯೋಗ ಕ್ರಿಯೆ ಯೂರೇಕಾ
ಅನ್ನುವಂಥಾ ಸರಳ ಅನುಭವ.
ಕನ್ನಡದಲ್ಲೇ ಅಲ್ಲ, ಇಡೀ ದೇಶದಲ್ಲಿ ಕಂಬಾರರಷ್ಟು ತೀವ್ರವಾಗಿ ನೆಲದ
ವಾಸನೆ ತುಂಬಿಕೊಂಡು ಜತೆಯಲ್ಲಿ ನವ್ಯತೆ ಆಧುನಿಕತೆಗಳನ್ನು
ಮೈಗೂಡಿಸಿಕೊಂಡಿರುವ ಸೃಜನಶೀಲ ನಾಟಕಕಾರ ಸಿಗುವುದು ದುರ್ಲಭ.
ನನ್ನ ಅಭಿಪ್ರಾಯದಲ್ಲಿ ದೇಶದ ಇಂದಿನ ಎಲ್ಲಾ ನಾಟಕಕಾರರ ನಡುವೆ
ಕಂಬಾರರು ಅದ್ವಿತೀಯರು. ಅವರ ಜಾಗದಲ್ಲಿ ಇನ್ನೊಬ್ಬರನ್ನು
ಯೋಚಿಸುವುದು ನನಗಂತೂ ಸಾಧ್ಯವಿಲ್ಲ.
– ಬಿ.ವಿ.ಕಾರಂತ
I feel that your play is one of the freshest plays in recent times
and the equation of the political philosophy with the sexual is a
perceptive brilliant stroke. Many have hovered around the idea
but none could express it in such marvelous theatrical terms.
– Sathyadev Dubey
ಜೋಕುಮಾರ ಸ್ವಾಮಿ (ನಾಟಕ) : ಪಾತ್ರ
ಪರಿಚಯ
ಫೆಬ್ರವರಿ ೧೧, ೧೯೭೨ರಂದು ರವೀಂದ್ರ ಕಲಾಕ್ಷೇತ್ರದ ಬಯಲು
ರಂಗಮಂದಿರದಲ್ಲಿ ಪ್ರತಿಮಾ ನಾಟಕರಂಗ ಮತ್ತು ಕನ್ನಡ ಸಾಹಿತ್ಯ
ಕಲಾಸಂಘದವರಿಂದ (ಸಂಗೀತ ನಾಟಕ ಅಕಾಡಮಿಯ ಸಹಕಾರದೊಂದಿಗೆ ಜೋಕುಮಾರ
ಸ್ವಾಮಿ ಪ್ರಥಮ ಬಾರಿ ಪ್ರದರ್ಶಿತವಾಯಿತು. ಆಗ ಭಾಗವಹಿಸಿದ್ದ
ಕಲಾವಿದರು, ನಿರ್ದೇಶಕರು ಮತ್ತು ರಂಗ ನಿರ್ಮಾಪಕರು.
ಗಿರೀಶ್ ಕಾರ್ನಾಡ ಗೌಡ
ಉಮೇಶರುದ್ರ ಬಸಣ್ಣ
ಕೃಷ್ಣರಾಜು ಗುರ್ಯಾ
ಪ್ರಸನ್ನಕುಮಾರ್ ಒಬ್ಬ
ನಾಗಭರಣ ಇನ್ನೊಬ್ಬ
ಅರ್ಜುನ ಮತ್ತೊಬ್ಬ
ಗೋಪಾಲಕೃಷ್ಣ ಮತ್ತೊಬ್ಬ
ಮೋಹನರಾಮ
ಕೃಷ್ಣಪ್ಪ
ಶಶಿಧರ
ಸತ್ಯೇಂದ್ರ
ನಾರಾಯಣಸಿಂಗ್
ತಿಮ್ಮಶೆಟ್ಟ
ಶ್ರೀಮತಿ ಗೌಡತಿ
ಉಮೇಶರುದ್ರ
ರೇವತಿ ನಿಂಗಿ
ಗಿರಿಜ ಶಾರಿ
ಕಲ್ಪನ ಬಸ್ಸಿ
ಆಶಾ ಶಿವಿ
ಮೇಳದಲ್ಲಿ ಚಂದ್ರಶೇಖರ ಕಂಬಾರ,
ಬಿ.ವಿ.ಕಾರಂತ,
ಸಿದ್ರಾಮಯ್ಯ,
ದೊಡ್ಡರಂಗೇಗೌಡ,
ಭಾರತಿ, ಸುನಂದ,
ವಿಜಯಲಕ್ಷ್ಮಿ
ವಾದ್ಯಗಳು : ಗುರುಸಿದ್ದಪ್ಪಾ
ಸೊಂಟನವರ (ಶಿವಾಪುರ)
ಸಂಗೀತ :
ಚಂದ್ರಶೇಖರ ಕಂಬಾರ
ರಂಗವಿನ್ಯಾಸ :
ವಿ.ರಾಮಮೂರ್ತಿ
ಉಡುಗೆ ತೊಡುಗೆ :
ಪ್ರೇಮಾ ಕಾರಂತ
ನಿರ್ದೇಶನ : ಬಿ.ವಿ.
ಕಾರಂತ
ಜೋಕುಮಾರ ಸ್ವಾಮಿ (ನಾಟಕ) : ಗಣ್ಣಪದ
ಶರಣು ಹೇಳೇವ್ರಿ ಸ್ವಾಮಿ ನಾವು ನಿಮಗ
ಸದ್ದುಗದ್ದಲ ಮಾಡಬ್ಯಾಡ್ರಿ ಆಟದೊಳಗ
ಸಣ್ಣ ಹುಡುಗರು ನಾವು ಬಣ್ಣಕ ಹೆದರವರು
ಚೆನ್ನಾಗಿ ಕೇಳರಿ ನಮ್ಮ ಕವನ
ಕೂತೀರಿ ಹೆಣ್ಣುಗಂಡು ಭರ್ತಿಸಭಾ ಇರಲಿ
ಬುದ್ಧಿವಂತರ ಪ್ರೀತಿ ನಮ್ಮ ಮ್ಯಾಲಾ
ಭೂಸನೂರಮಠದಯ್ಯಾ ಸಾವಳಗಿ ಶಿವಲಿಂಗಾ
ಇರಲೆಪ್ಪಾ ನಿಮ್ಮ ಪ್ರೀತಿ ನಮ್ಮ ಮ್ಯಾಗ||
ಜೋಕುಮಾರ ಸ್ವಾಮಿ (ನಾಟಕ) : ಪೂರ್ವ
ರಂಗ
(ರಂಗದ ಮಧ್ಯದಲ್ಲಿ ತರಕಾರಿ ತುಂಬಿದ ಒಂದು ಬುಟ್ಟಿ, ಅದರ ಮಧ್ಯದಲ್ಲಿ ಒಂದು ಪಡವಲ ಕಾಯನ್
ನು ಲಂಬವಾಗಿ ನೆಟ್ಟಿದೆ.)
ಸೂತ್ರಧಾರ : ಕೂತ ನಿಂತಂಥಾ ಬುದ್ದಿವಂತರಿಗೆಲ್ಲಾ ಶರಣು. ಈ ನಮ್ಮ ಹೊಸಾ
ದೇವರು-ಕಾಣಸ್ತಾನಲ್ಲ, -ಹೆಸರ ಜೋಕುಮಾರಸ್ವಾಮಿ ಅಂತ. ಜೋಕುಮಾರನ
ಸುದ್ದಿ ನಿಮಗೇನೂ ಹೊಸದಲ್ಲ. ಆದರ ಬ್ಯಾರೆ ದೇವರಿಗೂ ಈ ದೇವರಿಗೂ ಒಂದ
ಫರಕ ಐತಿ. ಉಳಿದ ದೇವರು ಸ್ವಲ್ಪ ಮುಖಸ್ತುತಿ ಮಾಡಿದರ ಸಾಕು, ಬಾಯಿತುಂಬ
ವರ ಕೊಡತಾವ. ಆದರ ಯಾಕೋ ಏನೋ ಒಂದ ವರಾನೂ ಖರೆ ಬಾಣಿಲ್ಲ. ಅವೂ ನಮ್ಮ
ಮಂತ್ರಿಗಳ ಮಾತಿನ್ಹಾಂಗ ಹುಸಿಹೋಗತಾವಷ್ಟ. ಆದರ ಈ ನಮ್ಮ ದೇವರು
ನೈವೇದ್ಯ ನೀಡಿದರ ಮಾತಾಡ್ಯಾನು ಅಂದೀರಿ, ಪೂಜಿ ಮಾಡಿ ಮ್ಯಾಲ ತೋಳ
ತೆಕ್ಯಾಗ ಹಿಡಕೊಂಡರ, ಕೆಳಗ ಉಡೀತುಂಬ ಮಕ್ಕಳಾ ಕೊಟ್ಟಿರತಾನ! ಇಂಥಾ
ವಿಪರೀತ ದೇವರ ಕಥೀನ s ಇಂದಿನ ಆಟ. ಎಲ್ಲಿ? ಅಪೂ ಹಿಮ್ಯಾಳ್ಯಾ-
ಹಿಮ್ಮೇಳ : ಯಾಕ್ಕರದಿ ? ಯಾಕ್ಕರದಿ?
ಸೂತ್ರಧಾರ : ಆಟದ ಆರಂಭಕ್ಕೆ ಜೋಕುಮಾರಸ್ವಾಮಿ ಪೂಜೆ ಮಾಡಬೇಕು.
ಸಾಮಗ್ರಿ ಸಮೇತ ಬಂದು, ಶಾಸ್ತ್ರದ ಪ್ರಕಾರ ಈ ದೇವರನ್ನ
ಪೂಜಿಸುವಂಥವನಾಗು.
ಹಿಮ್ಮೇಳ : ದೇವರು ಎಲ್ಲಿ ಐತೆಂದಿ?
ಸೂತ್ರಧಾರ : ಇಲ್ಲಿ ಕಾಣ್ಸಾಣಿಲ್ಲಾ?
ಹಿಮ್ಮೇಳ : ಈ ದೇವರ?
ಸೂತ್ರಧಾರ : ಯಾಕ ಈ ದೇವರಿಗೇನಾಗೇತಿ?
ಹಿಮ್ಮೇಳ : ಆಟದ ಆರಂಭಕ್ಕ ಗಣೇಶನ್ನ ಪೂಜೀ ಮಾಡೋದ ಬಿಟ್ಟ, ಇಂಥಾ ದೇವರ
ಪೂಜಿ ಮಾಡಂತಿ; ತಿಳೀಬಾರದ? ನಾಕ ಮಂದಿ ಬುದ್ದಿವಂತರೇನಂದಾರು?
ಸೂತ್ರಧಾರ : ಹುಚ್ಚಾ, ಎಲ್ಲಾ ದೇವರೂ ಒಂದ s ಅಂದಮ್ಯಾಲ ಯಾವ ದೇವರ ಪೂಜಿ
ಮಾಡಿದರೇನಾ? ಹಾಂಗ ನೋಡಿದರ ಈ ಜೋಕುಮಾರ ಸ್ವಾಮಿ ಗಣೇಶಗ ಖಾಸ
ತಮ್ಮಂದಿರಾಗಬೇಕು. ಇಂದಿನ ಆಟದ ಕಥೀನೂ ಈ ದೇವರ್ದ s. ಮೂಲ ದೇವರನ್ನ
ಹಾಂಗೆಲ್ಲಾ ಮರೀಬಾರದಪಾ.
ಹಿಮ್ಮೇಳ : ಅಂಥಾದ್ದೇನಪಾ ಇವನ ಮಹಿಮಾ?
ಸೂತ್ರಧಾರ : ಈ ಹೊತ್ತಿನ ಶುಭಮುಹೂರ್ತದಲ್ಲಿ, ಮಕ್ಕಳಿಲ್ಲದ ಬಂಜೇರು
ಬಂದು, ಪೂಜಾ ಮಾಡಿ, ಸ್ವಾಮೀನ ಪಲ್ಯಾ ಮಾಡಿ ಗಂಡಗ ತಿನ್ನಿಸಿದರ, ಅಪಾ
ಹತ್ತೆಂಟ ಮಕ್ಕಳು ಹಾ ಅನ್ನೂದರೊಳಗ ಹುಟ್ಟತಾವ!
ಹಿಮ್ಮೇಳ : ಬರೋಬರಿ. ಅದಕ್ಕ s ಹೆಂಗಸರ್ಯಾರೂ ಬಂದಿಲ್ಲ. ಫೆಮಿಲಿ
ಪ್ಲಾನಿಂಗ್ ಸಮಾಚಾರ ನಿನಗ ಗೊತ್ತ s ಇಲ್ಲೇನ?
ಸೂತ್ರಧಾರ : ಅಪೂ ಹಿಮ್ಯಾಳ್ಯಾ. ಗಂಡಂದಿರ ಪ್ರೀತಿ ಕಳಕೊಂಡಂಥಾ
ಬಾಲೇರು ಬಂದು, ಸ್ವಾಮೀನ್ನ ಪಲ್ಯಾಮಾಡಿ ತಿನ್ನಿಸಿದರ ಗಂಡಂದಿರೆಲ್ಲಾ
ಹಳೇ ನಾಯೀಹಾಂಗ ಮನ್ಯಾಗ ಬಿದ್ದಿರತಾರ!
ಹಿಮ್ಮೇಳ : ಹಾಂಗಿದ್ದರೆ ಇದು ಭಾಳಮಂದಿ ಹೆಂಗಸರಿಗೆ ಗೊತ್ತಿಲ್ಲ
ಬಿಡು.
ಸೂತ್ರಧಾರ : ಇಂಥಾ ದೇವರಿಗೆ ಏನೇನೂ ಅನ್ನಬಾರದು. ಪೂಜಾ ಸಾಮಗ್ರಿ
ತಗೊಂಬಾ.
ಹಿಮ್ಮೇಳ : ತಾ ಅಂದರ ತಂದೇನಪಾ, ಆದರ ಮಂದಿ ಬೈದರ ಆ ಬೈಗಳ್ನೆಲ್ಲಾ
ನಿನ್ನ ಹೆಸರಿಗೇ ಜಮಾ ಮಾಡಾವ ನಾನು, ತಾ ಅಂದಿ?
ಸೂತ್ರಧಾರ : ತಗೊಂಬರುವಂಥವನಾಗು.
ಹಿಮ್ಮೇಳ : ಘನ ಲಜ್ಜಿಗೇಡಿ ನೀನೂ! ಏನೇನ ತರಲಿ?
ಸೂತ್ರಧಾರ : ಕರಿಕಿ, ಪತ್ರಿ.
ಹಿಮ್ಮೇಳ : ಕರಿಕಿ ಪತ್ರಿ? ನಿಮ್ಮ ದೇವರು, ಯಾವದಾದರು ದನದ ಜಾತಿ
ಇದ್ದಿರಬೇಕೇನ? ಹಾಂಗಿದ್ದರ ಹೊಲದಕಡೆ ಹೊದಡ ಬಿಡಲ್ಲ. ಮೇದ ಬರಲಿ.
ಸೂತ್ರಧಾರ : ಹುಚ್ಚಾ ಬೆಂಕಿಯಂಥಾ ದೇವರಿಗೆ ಚೇಷ್ಟಾ ಮಾಡಬಾರದು.
ಶುಚಿರ್ಭೂತನಾಗಿ ಕರಿಕಿ ಪತ್ರಿ ತರುವಂಥವನಾಗು.
ಹಿಮ್ಮೇಳ : ಹಾಂಗ s ಆಗಲಿ, ಸೂತ್ರಧಾರ ನಾನಾದರು ಕರಿಕಿ ಪತ್ರಿ
ತಂದೇನ್ನೋಡು.
ಸೂತ್ರಧಾರ : ಇನ್ನು ಮೇಲೆ ಪನ್ನೀರು ತರುವಂಥವನಾಗು.
ಹಿಮ್ಮೇಳ : ಕಣ್ಣೀರಾ?
ಸೂತ್ರಧಾರ : ಪನ್ನೀರು, ಪನ್ನೀರು.
ಹಿಮ್ಮೇಳ : ತಿಳೀತ ಬಿಡು.
ಸೂತ್ರಧಾರ : ಏನ ತಿಳೀತು?
ಹಿಮ್ಮೇಳ : ಹಜಾಮರ ಬಟ್ಟಲದಾಗಿರತಾವ, ಅದ s ನೀರ ಹೌಂದಲ್ಲ?
ಸೂತ್ರಧಾರ : ಹುಚ್ಚಾ, ಪರಿಶುದ್ಧವಾದ ನೀರಿಗೆ ಪನ್ನೀರು ಪನ್ನೀರು
ಅಂತಾರ. ಅಂಥಾ ಪನ್ನೀರು ತಗೊಂಬರುವಂಥವನಾಗು.
ಹಿಮ್ಮೇಳ : ಸೂತ್ರಧಾರ, ಅವನ್ನಾದರು ತಂದಿದ್ದೇನ್ನೋಡು.
ಸೂತ್ರಧಾರ : ಇನ್ನುಮೇಲೆ, ಫಲಪುಷ್ಪ ತಗೊಂಡು, ಪೂಜಾ ಮಾಡಲಿಕ್ಕೆ ಒಬ್ಬ
ಗರತೀನ ಕರಕೊಂಡು ಬರುವಂಥವನಾಗು.
ಹಿಮ್ಮೇಳ : ನಿಮ್ಮ ದೇವರ ಭಾರೀ ತುಟ್ಟೀದಪಾ! ಫಲ ತಂದೇನು, ಪುಷ್ಪ
ತಂದೇನು. ಗರತಿ ಬೇಕಂತಿ ಎಲ್ಲಿಂದ ತರಲಿ? ಶುದ್ಧ ಗರತೀನ s ಬೇಕಂದಿ?
ಸೂತ್ರಧಾರ : ಹೌಂದ್ಹೌಂದು, ಶುದ್ಧ ಗರತೀನ s ಆಗಬೇಕು.
ಹಿಮ್ಮೇಳ : ಅದರಾಗ ಸೊಲ್ಪ ಬೆರಕಿಯಿದ್ದರ?
ಸೂತ್ರಧಾರ : ಛೇ ಛೇ ಹಾಂಗೆಲ್ಲಾ ಹೇಳಬಾರದು.
ಹಿಮ್ಮೇಳ : ಸೂತ್ರಧಾರ, ಫಲಪುಷ್ಪ ತಂದೇನ್ನೋಡು. ಗರತಿ ಸಮಾಚಾರ
ನನ್ನಿಂದ ಆಗಾಣಿಲ್ಲ ತಗಿ. ಬೇಕಂದರ ಈಗ s ಯಾರೂ ಇಲ್ಲ. ನಾನ s ಹೆಂಗಸಂತ
ತಿಳಕೊಂಡ ಸಾಗಸೋ ಹಾಂಗಿದ್ದರ ಸಾಗಸು.
ಸೂತ್ರಧಾರ : ಅಪಾ, ಹಿಂಗ್ಯಾಕಂತೀಯೋ?
ಹಿಮ್ಮೇಳ : ಹೇಂಗೇನ? ಇಂಥಾ ದೇವರ ಪೂಜಿಗಿ ಮಾನ ಮರ್ಯಾದಿ ಇದ್ದವರು ಯಾರ
ಬಂದಾರ ಹೇಳು? ಇದ್ದ ಮಾತ ಹೇಳಬೇಕಂದರ ಈ ಊರಾಗ ಖರೆ ಗರತೇರ ಯಾರಾದರು
ಇದ್ದರ ಅದು ನಮ್ಮಂಥಾ ನಾಕೈದ ಮಂದಿ ಹುಡಗೋ ರಂತ s ತಿಳಿ ಮತ್ತ! ಅಲ್ಲಾ,
ನಿಮ್ಮ ದೇವರಿಗಿ ಅದ್ಯಾಕಿಷ್ಟ ಹೆಂಗಸರ ಖಯಾಲಿ?
ಸೂತ್ರಧಾರ : ಹಾಂಗ s ಆಗಲಿ, ನೀನ s ಪೂಜೀಮಾಡು.
(ಸೂತ್ರಧಾರ ಮೇಳದೊಂದಿಗೆ ಹಾಡುತ್ತಾನೆ. ಹಾಡಿನೊಂದಿಗೆ ಹಿಮ್ಮೇಳದವನು
ಪೂಜಿ ಮಾಡುತ್ತಾನೆ.)
ಮೇಳ :
ಸುವ್ವೀ ಬಾ ಸುಂದರಾ| ಸ್ವಾಮಿ
ಸುವ್ವೀ ಬಾ ಚಂದಿರಾ
ಸುವ್ವೀ ಬಾರಯ್ಯಾ ಜೋಕುಮಾರ ಸ್ವಾಮಿ ||
ಸೊಪ್ಪಿನ ದೇವರೊ ಬೈಗಳ ಮಂಗಳಾರತಿಯವನೊ
ಉಪ್ಪು ಹುಳಿ ಖಾರ ನೈವೇದ್ಯದವನೊ ||
ಮಳೆಯಾಗಿ ಬಿದ್ದವನೆ ಸ್ವಾಮಿ ಬೆಳೆಯಾಗಿ ಎದ್ದವನೆ
ಎಳಿನಗಿ ನಕ್ಕವನೆ ಬೇಲೀ ಹೂವಿನೊಳಗೆ ||
ಹುಟ್ಟಿದೆರಡ ದಿನಕ ಪಟ್ಟದ ಹುಡಿಗೇರನೆಳೆದವನೆ
ಮಂದಿ ಬಂದಾರೊ ಕುಡುಗೋಲ ಹಿಡದಾ ||
ಹಿಮ್ಮೇಳ : ಇಂಥಾ ಹಲ್ಕಾ ದೇವರನ್ನ, ಅದೂ ಇಂಥಾ ಸಾರ್ವಜನಿಕ ಸ್ಥಳದೊಳಗ
ಹೆಂಗ ಪೂಜೀ ಮಾಡಂತಿಯೋ?
ಸೂತ್ರಧಾರ : ಅದೆಲ್ಲಾ ಮನುಷ್ಯರೊಳಗೆ ಇರತದೇನಪಾ, ದೇವರೊಳಗ ಸಾಚಾ
ದೇವರು, ಹಲ್ಕಾ ದೇವರು ಇರೋದಿಲ್ಲಾ.
ಹಿಮ್ಮೇಳ : ನೀ ಈ ಹೊತ್ತ ಏನ ಮರತ ಬಂದೀದಿ ತಿಳೀತ ನನಗ.
ಸೂತ್ರಧಾರ : ಅದೇನಪಾ?
ಹಿಮ್ಮೇಳ : ನಾಚಿಕಿ ಬಿಟ್ಟ ಬಂದೀದಿ, ಹೌಂದಲ್ಲ?
ಸೂತ್ರಧಾರ : ನಾಚಿಕೀ ಹಿಡಿದರ ನಮ್ಮ ದೇವರು ಸಿಟ್ಟಾಗತಾನ. ಸುಮ್ಮನ
ಪೂಜಿ ಮಾಡುವಂಥವನಾಗು.
ಹಿಮ್ಮೇಳ : ಹೂ ಹೊಡಿ.
ಮೇಳ :
ಹುಟ್ಟಿದ್ಮೂರನೆ ದಿನಕ ಮುಟ್ಟಾದ ಹುಡಿಗೇರನೆಳೆದವನೆ
ಮಾವರು ಬಂದಾರೊ ಕೋಲ ಕೊಡಲಿ ಹಿಡದಾ||
ನಾಕನೆ ದಿನದೊಳಗ ಸ್ವಾಮಿ ಮುದಿಕೇರನೆಳೆದವನೆ
ಮುದುಕರು ಬಂದಾರೊ ಗುಂಡಕಲ್ಲಾ ಹಿಡದಾ||
ಹುಟ್ಟಿದೈದನೆ ದಿನಕ ಸ್ವಾಮಿ ಐದೇರನೆಳೆದವನೆ
ಹೈದರು ಬಂದಾರೊ ಹಗ್ಗ ಬಲಿಯ ಹಿಡದಾ||
ಹುಟ್ಟಿದಾರನೆ ದಿನಕ ಸ್ವಾಮಿ ನಾರೇರನೆಳೆದವನೆ
ಕರದ ತಂದಾರೊ ಐದನೂರ ಮಂದಿ||
ಹಿಮ್ಮೇಳ : ಸಡ್ಲ ಬಿಟ್ಟರ ನೀನೂ ಭಾರಿ ಹಾಡವಪಾ! ಹಾಡಾಕ ಯಾರಿಗಿ
ಬರಾಣಿಲ್ಲಾ? ಹಾಡ್ಲಿ?-
ಮೋಟರದಾಗ ಇದ್ದವನೆ ಥೇಟರದಾಗ ಬಿದ್ದವನೆ
ಮನೆಯಿಲ್ಲೇನಯ್ಯಾ ಮಲಗಲಿಕ್ಕೆ?||
ಸೂತ್ರಧಾರ : ಯಾಕ? ನಾ ಚಂದದಿಂದ ಹಾಡಲಿಲ್ಲೇನು?
ಹಿಮ್ಮೇಳ : ಓಹೊ! ಭಾಳ ಚಂದದಿಂದ ಹಾಡಿದಿ. ಆದರ ಸೊಲ್ಪ ಕಡಿಮಿ ಚಂದದಿಂದ
ಹಾಡು ಅಂತ. ಇಲ್ಲದಿದ್ದರ ಕೂತ ಮಂದಿಗಿ ಹಾಡಿನರ್ಥ ತಿಳದರ ಏನ ಮಾಡತಿ?
ಇಂಥಾ ಮಾತ ತಿಳೀಧಾಂಗ ಹೇಳಬೇಕಪಾ!
ಸೂತ್ರಧಾರ : ಅಪಾ, ಈ ಯಾವ ಮಹಾದೇವರ ಮಹಿಮೆಯನ್ನು ನಾನು ಗದ್ಯದಲ್ಲಿ
ವರ್ಣನೆ ಮಾಡಬೇಕೇನು?
ಹಿಮ್ಮೇಳ : ಇಲ್ಲದಿದ್ದರ ಇದು ಭಾಳ ರಿಸ್ಕೀ ದೇವರೋ ಹುಚ್ಚಾ.
ಸೂತ್ರಧಾರ : ಹಾಂಗಿದ್ದರ ಕೇಳುವಂಥವನಾಗು. ಈ ಯಾವ ನಮ್ಮ ಮಹಾದೇವರು,
ಸೊಪ್ಪಿನ ದೇವರು, ಮಳೆ ದೇವರು ಬೆಳೆ ದೇವರು, ಬೈಗಳ ದೇವರು ಜೋಕುಮಾರ
ಸ್ವಾಮಿ,
ಹಿಮ್ಮೇಳ : ಓಹೋ!
ಸೂತ್ರಧಾರ : ಹುಟ್ಟಿದೆರಡೇ ದಿನದಲ್ಲಿ ಪಟ್ಟಣದ ಹುಡಿಗೇರನ್ನ,
ಹಿಮ್ಮೇಳ : ಆಹಾ!
ಸೂತ್ರಧಾರ : ಎಳೆದಾ-
ಹಿಮ್ಮೇಳ : ಇಲ್ಲಿ ತಪ್ಪಿದಿ.
ಸೂತ್ರಧಾರ : ಯಾಕ?
ಹಿಮ್ಮೇಳ : ಎಂಥಾ ಅಪರೂಪ ದೇವರ ಬೆನ್ನ ಹತ್ತೀದಿಯೋ? ಮನಶೇರಿಗೊಂದ
ಬ್ಯಾರೇ ಉದ್ಯೋಗಿಲ್ಲಾ ಎಳೀತಾರ. ನಿಮ್ಮ ದೇವರೂ ಎಳೆಯೋದಂದರ!
ಹುಡಿಗೇರ್ನ ಎಳದಾ, ಮುದಿಕೇರ್ನ ಎಳದಾ! ಹೋಗಲಿ, ಅದನ್ನಷ್ಟ ಮುಚ್ಚಿ
ಹೇಳಾಕ ಆಗಾಣಿಲ್ಲೇನ?
ಸೂತ್ರಧಾರ : ಎದನ್ನ?
ಹಿಮ್ಮೇಳ : ಎಳದಾ ಎಳದಾ ಅನ್ನೋದನ್ನ? ಇಂಥಾ ಮಾತಿಗಿ ಈ ಕಡೆ ಅಶ್ಲೀಲ
ಅಂತಾರಪಾ. ನೋಡಿಲ್ಲ ಕುಂತಾರ……. ಇಂಥಾ ಮಾನವಂತರ ಸಭಾದೊಳಗ ಅಶ್ಲೀಲ
ಅನ್ನಬಾರದು. ಅದಕ್ಕೊಂದ ಉಪಾಯ ಹೇಳಲಿ? ಎಳದಾ ಎಳದಾ ಬಂದಲ್ಲೆಲ್ಲಾ ಲವ್
ಮಾಡಿದಾ ಲವ್ ಮಾಡಿದಾ ಅನ್ನು.
ಸೂತ್ರಧಾರ : ಹಾಂಗ s ಆಗಲಿ. ಈ ಯಾವ ನಮ್ಮ ಮಹಾದೇವರು…..
ಹಿಮ್ಮೇಳ : ಸೊಪ್ಪಿನದೇವರು ಆ ದೇವರು ಈ ದೇವರು ಇತ್ಯಾದಿ ದೇವರು-ಮುಂದ?
ಸೂತ್ರಧಾರ : ಹುಟ್ಟಿದ ಮೂರನೇ ದಿನದಲ್ಲಿ ಏನು ಮಾಡಿದಾ?
ಹಿಮ್ಮೇಳ : ಏನು ಮಾಡಿದಾ?
ಸೂತ್ರಧಾರ : ಮುಟ್ಟಾದಂಥಾ……….
ಹಿಮ್ಮೇಳ : ಮತ್ತ ಅಶ್ಲೀಲ! ಆ ಪದ ತಗದು ಗಟ್ಟೀ ಹುಡಿಗೇರು ಅನ್ನು.
ಸೂತ್ರಧಾರ : ಹುಟ್ಟಿದ ಮೂರನೇ ದಿನದಲ್ಲಿ ಗಟ್ಟಿ ಹುಡಿಗೇರನ್ನ,
ಹಿಮ್ಮೇಳ : ಲವ್ ಮಾಡಿದಾ.
ಸೂತ್ರಧಾರ : ನಾಕನೇ ದಿನದಲ್ಲಿ ಮುದಿಕೇರನ್ನ,
ಹಿಮ್ಮೇಳ : ಲವ್ ಮಾಡಿದಾ.
ಸೂತ್ರಧಾರ : ಐದನೇ ದಿನದಲ್ಲಿ ಐದೇರನ್ನ,
ಹಿಮ್ಮೇಳ : ಲವ್ ಮಾಡಿದಾ.
ಸೂತ್ರಧಾರ : ಆರನೇ ದಿನದಲ್ಲಿ ನಾರೇರನ್ನ,
ಹಿಮ್ಮೇಳ : ಲವ್ ಮಾಡಿದ. ಅಪ್ಪಾ ಸೂತ್ರಧಾರ, ನಿಮ್ಮ ದೇವರು
ಪ್ರಾಸಕ್ಕಾಗಿ ಅವರೆನ್ನೆಲ್ಲಾ ಲವ್ ಮಾಡಿದ್ನೊ? ಅಥವಾ ನೀನ s
ಹೊಂದಿಸೀಯೊ? ಇರಲಿ, ಮುಂದೇ ನಾಯ್ತು?
ಸೂತ್ರಧಾರ : ಆವಾಗ ಏಳನೇ ದಿನ-ಹೆಂಡಂದಿರ ಗಂಡರು ಕೊಡಲಿ ಹಿಡಿಕೊಂಡ
ಬಂದರು. ಮುದಕೇರ ಮುದುಕರು ಗುಂಡಕಲ್ಲ ಹಿಡಕೊಂಬಂದರು. ಐದೇರ ಹೈದರು
ಹಗ್ಗದ ಬಲಿ ಹಿಡಕೊಂಬಂದರು. ಹಿಂಗ ಎಲ್ಲರೂ ಎಣಿಸಿ ಐನೂರ ಜನಾ ಆಗಿ
ಎಲ್ಲಿ ಬಂದರು?
ಹಿಮ್ಮೇಳ : ಜೋಕುಮಾರಸ್ವಾಮೀ ಹತ್ತರ ಬಂದರು.
ಸೂತ್ರಧಾರ : ಬಂದೇನ ಮಾಡಿದರು?
ಹಿಮ್ಮೇಳ : ಅದಿರ್ಲಿ, ಮುಂದಿಂದ ನೀ ಹಾಡಿನಾಗ s ಹೇಳೋದು ಒಳ್ಳೇದೇನಪಾ,
ಯಾಕಂದರ ನಿನ್ನ ಗದ್ಯ ಸೊಲ್ಪ ಡೇಂಜರಸ್ ಕಾಣತದ.
ಸೂತ್ರಧಾರ : ಹಾಂಗಿದ್ದರ ಕೇಳುವಂಥವನಾಗು. ಆ ಐನೂರ್ಮಂದಿ ಜೋಕುಮಾರ
ಸ್ವಾಮೀ ಹತ್ತಿರ ಬಂದೇನ ಮಾಡಿದರು?
ಹಿಮ್ಮೇಳ : ಏನ ಮಾಡಿದರು?
ಮೇಳ :
ಎಣಿಸಿ ಐನೂರ್ಮಂದಿ ಅವರಿಗಿ ಸಾವಿರ ಕೈಗಳು
ಹಿಡದ ಕಡದಾರೋ ಎಳೀ ದೇವರನ್ನಾ||
ಸಾವಿರ ಕೈಗಳು ಕೈಗೊಂದ ಕೊಡಲಿ ಕುಡಗೋಲು
ಹೊಡದ ಕೊಂದಾರೊ ಎಳೀ ದೇವರನ್ನಾ||
ಕೊಂದಾರೆ ಒಗೆದಾರೋ ಸ್ವಾಮಿನ ಕಡದಾರೆ ಒಗೆದಾರೊ
ನೆತ್ತರ ಹರಿದಾವೊ ಹೊಳಿಹಳ್ಳ ತುಂಬಿ||
ನೆತ್ತರ ಬಿದ್ದಲ್ಲಿ ಆಹಾ ಬೆಳಿಗಳು ಎದ್ದಾವೊ
ಮಣ್ಣು ಮಣ್ಣೆಲ್ಲಾ ಹಸೀಹಸರ ತುಂಬಿ ||
(ಅಷ್ಟರಲ್ಲಿ ಹೊಲೇರ ಶಾರಿ ನರ್ತಿಸುತ್ತ ಬಂದು ದೇವರಿಗೆ ನಮಸ್ಕರಿಸಿ ದೇವರ ಬುಟ್ಟಿ ಹೊರ
ಬೇಕೆನ್ನುವಾಗ ಹಿಮ್ಮೇಳದವನು ಗಮನಿಸುವನು)
ಹಿಮ್ಮೇಳ : ನಿಮ್ಮ ದೇವರೂ ಅಡ್ಡಿಯಿಲ್ಲಪಾ! ಖರೇ ಗಿರಾಕೀನ್ನ s
ಹಿಡಕೊಂಡ ಬಂದಾ ನ್ನೋಡು.
(ಅವಳ ಬಳಿಗೆ ಓಡಿಹೋಗಿ)
ಅಂದವಾದ ಮಂದಿರವನ್ನು ಬಿಟ್ಟು
ಸುಂದರವಾದ ಈ ಸಭಾಂಗಣಕ್ಕೆ ಬಂದು
ಬಂಧುರವಾದ ಈ ದೇವರನ್ನು ಹೊತ್ತು ಒಯ್ಯುವ
ಸುಂದರೀ ನೀನು ಯಾರು? ನಿನ್ನ ನಾಮಾಂಕಿತವೇನೂ?
ಹೇಳುವಂಥವಳಾಗು-
ಶಾರಿ : ಇದ್ಯಾವದ? ಪುಸ್ತಕಧಾಂಗ ಮಾತಾಡತೈತಿ!
ಹಿಮ್ಮೇಳ : ಸೂತ್ರಧಾರ, ನೀನ s ಬಾರಪಾ. ನಮಗಿದು ಬಗಿಹರಿವೊಲ್ದು!
ಸೂತ್ರಧಾರ : ಅಮ್ಮಾ, ಬಂದಂಥವಳು ನೀನು ಧಾರು? ನಿನ್ನ ನಾಮಾಂಕಿತವೇನು?
ಚಂದದಿಂದ ತಿಳಿಸುವಂಥವಳಾಗು.
ಶಾರಿ : ಸೂತ್ರಧಾರ, ತಿಳಿಸಾಕ s ಬೇಕ?
ಸೂತ್ರಧಾರ : ಹೌಂದು, ತಿಳಿಸಾಕ s ಬೇಕು.
ಶಾರಿ : ಸೂತ್ರಧಾರ, ಮುದುಕರು ಬಂದು ನನಗ ಏ ಪೋರೀ ಏ ಪೋರೀ ಅಂತಾರ. ಸಣ್ಣ
ಹುಡುಗರು ಬಂದು ಏ ಮುದುಕೀ ಏ ಮುದಿಕೀ ಅಂತಾರ. ಎರಡೂ ಅಲ್ಲದ ಇಂಥಾ
ಸಭ್ಯರು ಬಂದು ಹೊಲೇರ ಸೂಳಿ ಶಾರೀ ಶಾರೀ ಅಂತಾರ ನೋಡು.
ಸೂತ್ರಧಾರ : ಅಮ್ಮಾ ನೀ ಶಾರವ್ವಂತ ನಮಗಾದರು ತಿಳೀತು. ಕೂತಂಥಾ
ರಸಿಕರಿಗಾದರೂ ತಿಳೀತು. ಆದರ ನೀ ಇಲ್ಲಿಗ್ಯಾಕ ಬಂದಿ? ಜೋಕುಮಾರ
ಸ್ವಾಮೀನ್ನ ಯಾಕ ಒಯ್ತಿ? ಅದನ್ನಾದರು ತಿಳಿಸುವಂಥವಳಾಗು.
ಶಾರಿ : ಅಪ್ಪಾ ಸೂತ್ರಧಾರ, ಜೋಕುಮಾರಸ್ವಾಮಿ ದೊಡ್ಡ ದೇವರು. ಬಂಜೇರಿಗೆ
ಮಕ್ಕಳಾ ಕೊಡೋ ದೇವರು. ಗಂಡ ಇಲ್ಲದವರಿಗೆ ಗಂಡನ್ನ ಕೊಡೋ ದೇವರು.
ಹಿಮ್ಮೇಳ : ಹೌಂದು, ನಿನಗ ಮಿಂಡನ್ನ ಕೊಡೋ ದೇವರು.
ಶೌರಿ : ಯಾರಾದರು ಮಕ್ಕಳಿಲ್ಲದ ಬಂಜೇರು ಬಂದು ಒಯ್ದಾರಂತ ಕಾದ ನೋಡಿದೆ,
ಯಾರೂ ಬರಲಿಲ್ಲ. ನಾನಾದರೂ ಒಯ್ತೇನಿ. ನನಗೂ ವಯಸ್ಸಾಗಿ ಗಿರಾಕಿ ಕಡಿಮಿ
ಆಗ್ಯಾವ, ಈ ಸ್ವಾಮೀನನ್ನ ಪಲ್ಲೆ ಮಾಡಿ ನೀಡಿದರ ಇದ್ದ ಗಿರಾಕಿ ಆದರೂ
ನನ್ನ ಮನೀ ಮುಂದ ಬಿದ್ದಿರತಾವ!
ಹಿಮ್ಮೇಳ : ಅಂತೂ ಈ ದೇವರ ಉಪಯೋಗ ಐತಿ ಅಂಧಾಂಗಾಯ್ತು.
ಸೂತ್ರಧಾರ : ಶಾರವ್ವ, ಹಾಂಗಿದ್ದರ ನೀನಾದರು ಸ್ವಾಮೀನ್ನ
ಒಯ್ಯುವಂಥವಳಾಗು.
(ಶಾರಿ ಬುಟ್ಟಿ ಹೊರುವಳು)
ಹಿಮ್ಮೇಳ : ಏ ತಡಿ ತಡಿ,
(ಓಡಿ ಹೋಗಿ ಅವಳ ಹಿಂದೆ ಆಶೀರ್ವಾದ ಮಾಡುವ ಭಂಗಿಯಲ್ಲಿ ನಿಂತುಕೊಂಡು)
ಮಗನೇ ಸೂತ್ರಧಾರ, ನಿನ್ನ ಪೂಜೆಯಿಂದ ನನಗೆ ಪ್ರೀತಿ ಆಗಿದೆ. ನಿನ್ನ ಆಟ
ಸಾಧ್ಯವಾದರೆ ಸುಸೂತ್ರ ಸಾಗಲಿ ಅಂತ ಆಶೀರ್ವಾದ ಮಾಡತೇನು; ಇನ್ನು ಮೇಲೆ
ನೀನು ನಿನ್ನ ಆಟ ಸುರುಮಾಡುವಂಥವನಾಗು.
(ಸೂತ್ರಧಾರ ನಮಿಸುತ್ತಾನೆ)
ಜೋಕುಮಾರ ಸ್ವಾಮಿ (ನಾಟಕ) :
ಜೋಕುಮಾರ ಸ್ವಾಮಿ
(ಗೌಡನ ಮನೆ, ಬಸ್ಸಿ, ಶಿವಿ, ನೀಲಿ, ನೀಲಿ ಗೌಡ್ತಿಗಾಗಿ ಕಾಯುತ್ತಿದ್ದಾರೆ. ಅಷ್ಟರಲ್ಲಿ
ಗೌಡ್ತಿ ಜೋಕುಮಾರ ಸ್ವಾಮಿಯ ಬುಟ್ಟಿಯೊಂದಿಗೆ ಪ್ರವೇಶಿಸುವಳು)
ಗೌಡ್ತಿ : ಬಸ್ಸಿ, ನೋಡ, ಎಷ್ಟ ಅಂಜಿಸಿದಿರಿ! ನಾ ಸೊಲ್ಪ ದೂರ
ಹೋಗೋದಕ್ಕೂ ಹೊಲೇರ ಶಾರಿ ತಾನ s ಜೋಕುಮಾರ ಸ್ವಾಮೀನ ತರೋದಕ್ಕೂ ಸಮ
ಆಯ್ತು. ನನಗ ಬೇಕಂತ ಯಾರೋ ಹೇಳಿದ್ದರಂತ, ತಗೋ ಎವ್ವಾ ಅಂದ್ಲು. ಲಗು
ಪೂಜಿ ಸುರು ಮಾಡ್ರಿ.
ಬಸ್ಸಿ : ಎಲ್ಲಾ ತಯಾರ s ಐತಿ.
(ಬಸ್ಸಿ, ಶಿವಿ, ನೀಲಿ ಹಾಡತೊಡಗುವರು. ಆಗ ಜೋಕುಮಾರ ಸ್ವಾಮಿಗೆ, ಅಂದರೆ ಪಡುವಲ ಕಾಯಿಗೆ ಕ
ಣ್ಣು ಮೀಸೆ ಬರೆದು ರುಮಾಲು ಸುತ್ತುತ್ತಾರೆ. ಆಮೇಲೆ ಅದನ್ನು ತಗೊಂಡು ಗೌಡ್ತಿ ಹಾಡಿನ ಭಾಗ
ಗಳನ್ನು ಅಭಿನಯಿಸುತ್ತಾಳೆ. ಆಗ ಅವಳೊಂದಿಗೆ ಉಳಿದವರೂ ನರ್ತಿಸುತ್ತಾರೆ)
ಬಸ್ಸಿ
ಶಿವಿ
ನೀಲಿ :
ಚೆಂದಾನ ಹಸರಂಗಿ ದೋತರ ಜರತಾರಿ
ವಾರಿ ರುಂಬಾಲ ಚೆಲುವಾ
ಜೋಕುಮಾರ ಸ್ವಾಮಿನ ನೋಡಿಕೊಂಡ ಗೆಳತೆವ್ವ
ಪೂಜಿ ಮಾಡೋಣು ನಡಿಯೇ||
ಮೀಸ್ಯಾಗ ನಗಿಯೇನ, ಕೆನ್ನಿಯ ಹೊಳಪೇನ
ಹುಬ್ಬ ಕುಣಿಸುವ ತುಂಟಾ
ಬಿಂಕದ ಬಾಲೇರ ಟೊಂಕದಮ್ಯಾಲ ಕಣ್ಣ
ಇವ ಜೋಕುಮಾರ ಏನ? ||
ಹವ್ವಲ್ಲೆ ಅಂದರ ಹೌಹಾರಿ ನಿಂತಾನ
ನಾವಲ್ಲೋ ಕರದವರಾ
ಬಂಜೇರ ನಿಂತಾರೊ ಹುಬ್ಬಿಗಿ ಕೈ ಹಚ್ಚಿ
ದಯಮಾಡೊ ಸ್ವಾಮೀ ನೀನಾ||
ಎದಿಯಾಗ ಹುದುಗ್ಯಾರು ಹೂವಿನಾಗ ಮುಚ್ಯಾರು
ಫಲಕೊಡೊ ಮಾದೇವಾ
ಮೇಲಾದ ದೇವರು ಜೋಕುಮಾರ ಸ್ವಾಮಿಯ
ಪೂಜೆ ಮಾಡೇವೊ ನಾವಾ||
ಬಸ್ಸಿ : ಇನ್ನ ಲಗು ಸ್ವಾಮೀನ ಪಲ್ಲೆ ಮಾಡ ಎವ್ವಾ.
ಗೌಡ್ತಿ : ಇನ್ನೇನೂ ಮಾಡೋದ ಉಳಿದಿಲ್ಲ. ಹೌಂದಲ್ಲ?
ಬಸ್ಸಿ : ಇಲ್ಲರಿ.
ಗೌಡ್ತಿ : ತಾ ಹಂಗಾದರ.
(ಮತ್ತೆ ಮೂವರೂ ಹಾಡುವರು. ಗೌಡ್ತಿ ಹಾಡಿನಮತೆ ಅಭಿನಯಿಸುತ್ತ ಪಲ್ಲೆ ಮಾಡುವಳು)
ಬಸ್ಸಿ
ಶಿವಿ
ನೀಲಿ :
ರನ್ನದ ಮಣಿಮ್ಯಾಗ ಚಿನ್ನದ ಕುಡಗೋಲ
ಹೆಂಗ ಹೆರಚಲೆ ಸ್ವಾಮಿ
ಅಡ್ಡಡ್ಡ ಹೆರಚಲೆ ಉದ್ದುದ್ದ ಹೆರಚಲೆ
ಹೋಳ ಮಾಡೇನ ಸ್ವಾಮಿ||
ರನ್ನದ ಒಲಿಮ್ಯಾಗ ಚಿನ್ನದ ಗಡಿಗ್ಯಾಗ
ಕುದಿಯಲಿಟ್ಟೇನ ಸ್ವಾಮಿ
ಕುದಿಸಿ ಬೋನವ ಮಾಡಿ ಅಟ್ಟ ಅಡಗಿಯ ಮಾಡಿ
ಪಲ್ಲೆ ಮಾಡೇನ ಸ್ವಾಮಿ||
ಬಾ ಎನ್ನ ರುಚಿಗಾರ ಬಾ ಎನ್ನ ಸವಿಗಾರ
ಮಣಿ ಹಾಕಿ ಕಾದೇನೊ
ಜೋಕುಮಾರ ಸ್ವಾಮೀನ ಮೇಲಾದ ದೇವರ
ಪೂಜಿ ಮಾಡೇವ ನಾವಾ||
ಗೌಡ್ತಿ : ಬಸ್ಸೀ, ಗೌಡ ಬಂದ್ನೇನ್ನೋಡು.
ಬಸ್ಸಿ : (ನೋಡಿ ಬಂದು)
ಯಾರೋ ಇತ್ತ s ಬರೋಹಾಂಗ ಕಾಣತೈತಿ, ಗೌಡನ s ಏನೋ.
ಶಿವಿ : ನಾ ಇನ್ನ ಬರತೇನ್ರವ್ವಾ.
ನೀಲಿ : ನಾನೂ ಬರತೇನ್ರವ್ವಾ.
ಗೌಡ್ತಿ : ಇಲ್ಲೆ ಊಟಾ ಮಾಡಿಕೊಂಡ ಹೋಗೀರಂತ ಕೂಡ್ರೇ.
ಶಿವಿ : ಬ್ಯಾಡ s ಎವ್ವಾ ಮಕ್ಕಳ ಹಸದಿರಬೇಕು.
(ಇಬ್ಬರೂ ಹೋಗುವರು. ಒಬ್ಬ ಪ್ರವೇಶಿಸುವನು.)
ಒಬ್ಬ : ಅಮ್ಮಾವ್ರ s
ಗೌಡ್ತಿ : ಗೌಡ ಬರಲಿಲ್ಲೇನೋ?
ಒಬ್ಬ : ಇಲ್ಲರಿ.
ಗೌಡ್ತಿ : ಎಲ್ಲಿ ಹೋದರು?
ಒಬ್ಬ ಹೊಲಕ್ಕ ಮಲಗಾಕ .
ಗೌಡ್ತಿ : ಹೊಲಕ್ಕ?
ಒಬ್ಬ : ಆ ದೆವ್ವಿನ ಹೊಲಾ ಇಲ್ಲರಿ?
ಗೌಡ್ತಿ : ದಿನಾ ಬಿಟ್ಟ ಇಂದ s ಯಾಕ ಹೋದ?
ಒಬ್ಬ : ಬಸಣ್ಣನ ಜೋಡಿ ಜಗಳಾಡಿ, ಹೊಲಾ ನಂದು ನಾ ಮಲಗಾವಂತ . ಹೋಗಿ
ಕಂಬಳಿ, ಊಟಾ ತಗೊಂಬಾ ಅಂದರು.
ಗೌಡ್ತಿ : ಹೂ ನನ್ನ ನಶೀಬ! ಕಂಬಳಿ ತಗೊಂಡ್ಹೋಗು.
ಒಬ್ಬ : ಊಟಾನೂ .
ಗೌಡ್ತಿ : ಕಂಬಳಿ ಒಯ್ಯಿ.
(ಕಂಬಳಿ ಕೊಡುವಳು. ತೆಗೆದುಕೊಂಡು ಹೋಗುವನು)
ಬಸ್ಸಿ : ಇನ್ನ ಮಲಗರಿ ಎವ್ವ; ಹರ್ಯಾಗಿಂದ ಮಾಡಿದ್ದೆಲ್ಲಾ ನೀರಾಗ
ಹುಣಸೀ ಹಣ್ಣ ತೊಳಧಾಂಗಾಯ್ತು.
ಗೌಡ್ತಿ : ನೀ ಮಲಗನಡಿ. ನನ್ನ ದೈವ ನೀಯಾಕ ಅನುಭವಿಸಬೇಕು?
ಬಸ್ಸಿ : ಮತ್ತ ನೀ ಏನ್ಮಾಡ್ತಿ?
ಗೌಡ್ತಿ : ಇನ್ನೇನ ಮಾಡ್ಲಿ? ಎದೀಮ್ಯಾಲ ಕೈ ಇಟಗೊಂಡ ಮನೀ ಜಂತಿ
ಎಣಿಸಿಕೋತ ಮಲಗತೇನ!
ಬಸ್ಸಿ : ಗೌಡಗ ತಿಳೀಬೇಕ್ರೆವಾ.
ಗೌಡ್ತಿ : (ಅಳುತ್ತ, ಹಗಲುಗನಸು ಕಾಣುತ್ತ)
ಗೌಡಗ ಇನ್ಹೆಂಗ ಹೇಳಲಿ – ನಾ ಹೆಣ್ಣಂತ? ದೂರದ ಹಕ್ಕಿ ಹಾರಿ ಬರತೈತಿ!
ಗೂಡಿನಾಗ ಕೂರತೈತಿ! ಆ ನಾಡಿನ ಹಾಡೆಲ್ಲಾ ಹಾಡತೈತಿ! ಹಾಡ ಕೇಲಿ
ಮಣ್ಣಿಗಿ ಕಿವಿ ಮೂಡತಾವು! ಕಿವಿಗುಂಟ ಮುಖ, ಕೈ, ಕಾಲ ಮೂಡತಾವು! ಹಸರ
ಒಡಮುರದ ಹಬ್ಬತೈತಿ!
(ನಿಟ್ಟುಸಿರು ಬಿಟ್ಟು)
ಚಂದ್ರನ ಹಿಂದಿನ ರಾಕ್ಷಸ ಎಲ್ಲಿ ಬಿಡತಾನ! ಕಣ್ಣುಗುರಿ ಹಿಡಿದ ಹಾಡೋ
ಹಕ್ಕಿ ಹಿಡಿಕೊಂಡ! ಇದ s ಈಗ ಮೂಡಿದ ಹಸರ, ಹೂವ, ಚಿಗುರೆಲ್ಲಾ ಮಟಾಮಾಯ!
ಅದ s ಬೀಳನೆಲ! ಅದ s ಎಲೆ ಉದುರಿಸಿಕೊಂಡ ಗಿಡ! ಗಿಡದಾಗ ಬರೀ ಗೂಡ
ತೂಗ್ಯಾಡತಾವ; ಆ ಕಡೆ ಈ ಕಡೆ…
(ಈ ಮಾತು ಹೇಳುತ್ತಿರುವಾಗಲೇ ಬಸ್ಸಿ ಹೋಗಿ ಬಿಟ್ಟಿರುತ್ತಾಳೆ. ಗೌಡ್ತಿ ನಿಧಾನವಾಗಿ ಹಾಡು
ತ್ತಾಳೆ.)
ದೂರ ನಾಡಿನ ಹಕ್ಕಿ ಹಾರಿ ಬಾ ಗೂಡಿಗೆ
ಗೂಡು ತೂಗ್ಯಾವ ಗಾಳಿಗೆ
ಸುವ್ವೀ ಸುವ್ವಾಲಿ ಸುವ್ವಿ||
ಬೀಸುವ ಬಿರುಗಾಳಿ ಸುಳಿಯೊ ಸುಂಟರಗಾಳಿ
ನುಸುಳಿ ನೀ ಹಾರಿ ಬಾರಯ್ಯಾ
ಸುವ್ವೀ ಸುವ್ವಾಲಿ ಸುವ್ವಿ||
ಕಾವಲ ಸೈತಾನ ಗುರಿಯಿಟ್ಟ ಮುದಿಗಣ್ಣ
ತಪ್ಪೀಸಿ ಹಾರಿ ಬಾರಯ್ಯಾ
ಸುವ್ವೀ ಸುವ್ವಾಲಿ ಸುವ್ವಿ||
ಟೊಂಗಿ ಟೊಂಗಿಯ ಮ್ಯಾಲ ಕುಂತ ರೋಮಾಂಚನ
ಚಿಗುರು ಮೂಡಿಸ ಬಾರಯ್ಯಾ
ಸುವ್ವೀ ಸುವ್ವಾಲಿ ಸುವ್ವಿ||
(ಏನನ್ನೋ ಜ್ಞಾಪಿಸಿಕೊಂಡು ಥಟ್ಟನೇ ಎದ್ದು, ಮಾಡಿದ ಅಡಿಗೆಯನ್ನು ಗಂಟು ಕಟ್ಟಿಕೊಂಡು, ಒಂ
ದು ನೀರಿನ ಚರಿಗೆ ತಗೊಂಡು, ಗಂಟುತಲೆ ಮೇಲಿಟ್ಟುಕೊಂಡು ಹೊರಡುವಳು.)
ಜೋಕುಮಾರ ಸ್ವಾಮಿ (ನಾಟಕ) : ಹಕ್ಕಿ
ಸಿಕ್ಕಿತು
(ಗಿಡ, ಗುಡಿಸಲು, ನಾಲ್ವರೂ ಬಂದೂಕು ತಗೊಂಡು ಬರುತ್ತಾರೆ)
ಒಬ್ಬ : ಕುರಿ ಬಂದಿಲ್ಲೇನ್ರೊ?
ಇನ್ನೊಬ್ಬ : ಅದೆಲ್ಲಿ ಬರತೈತಿ! ಕಾಣಾಕಾಣಾ ಸಾಯಾಕ ಯಾರ ಬರತಾರ ಹೇಳು?
ಮತ್ತೊಬ್ಬ : ಹಸವಾಗೇತಿ ನೀ ಊಟಾ ಯಾಕೊ ತರಲಿಲ್ಲಾ?
ಒಬ್ಬ : ಗೌಡ್ತಿ ಕೊಡೋದಿಲ್ಲಂದಳಪಾ, ಕಂಬಳಿ ಕೊಟ್ಟಳು, ತಗೊಂಬಂದೆ.
ಮಗದೊಬ್ಬ : ಇನ್ನೇನ ಬೆಳೆತನಕ ಹಸದ ಇಲ್ಲೇ ಕುಂತಿರೋದಾ?
ಒಬ್ಬ : ಬೆಳತನಕ ಯಾಕೋ, ಬಸಣ್ಯಾ ಈಗ ಬರತಾನ ತಡಿ.
ಇನ್ನೊಬ್ಬ : ಬಂದಾನಂದಿ?
ಮತ್ತೊಬ್ಬ ; ಇನ್ನೊಂದ ತಾಸೆರಡರಾಸ ನೋಡಿ ಹೋಗೋಣಂತ.
ಮಗದೊಬ್ಬ : ಆಮ್ಯಾಲ ಬಂದರ?
ಒಬ್ಬ : ಆವ ಅಂಜಬುರುಕಲ್ಲ, ತಡೀರೋ ಬಂದ s ಬರತಾನ.
ಇನ್ನೊಬ್ಬ : ಛೇ ಛೇ, ಮನ್ನಿ ಮನ್ನಿ ಅವರಪ್ಪನ್ನ ಕೊಂದಿವಿ, ಇಂದ ಮತ್ತ
ಮಗನ್ನ ಕೊಲ್ಲೋದಂದರ ಇದ ಭಾಳ ಪಾಪದ ಕೆಲಸಪಾ.
ಮತ್ತೊಬ್ಬ : ಪಾಪ ಪುಣ್ಯ ನಮಗ್ಯಾಕಪಾ? ನಾವಂದರ ಹೇಳಿ ಕೇಳಿ ಗೌಡರ ನಾಯಿ
ಗೊಳೇನಪಾ! ಬೊಗಳಂದರ ಬೊಗಳಿದಾ, ಕಚ್ಚಂದರ ಕಚ್ಚಿದಾ.
ಇನ್ನೊಬ್ಬ : ಹಾಂಗ ನೋಡಿದರ ಬಸಣ್ಯಾಂದೇನ ತಪ್ಪೈತಿ?
ಮಗದೊಬ್ಬ : ಸಾಲಾ ಇಸಕೊಂಡ ಹೊಲಾ ಬರಕೊಟ್ಟದ್ದ ನನಗ ಗೊತ್ತ s
ಇಲ್ಲಂತಾನಲ್ಲೊ?
ಇನ್ನೊಬ್ಬ : ಅಲ್ರೋ, ನೀವ s ನೋಡೀರಿ, ನಮ್ಮ ಗೌಡ, ಎಷ್ಟಷ್ಟ ಮಂದೀ ಹೊಲಾ
ಹೆಂಗೆಂಗ ಮುಣಗಿಸಿಕೊಂಡಾನಂತ. ಮತ್ತ ಬಸಣ್ಯಾಂದ s ತಪ್ಪಂತೀರಿ.
ಒಬ್ಬ : ಅದೆಲ್ಲಾ ನಮಗ್ಯಾಕಪಾ? ಹೇಳಿದಷ್ಟ ಮಾಡಿದರಾಯ್ತು. ಗೌಡರ ಚಾಕು
ಹಿಡಿಯೋವಾಗ “ಗೌಡರ s ನಿಮ್ಮ ಅನ್ನಕ್ಕ ನಾ ಎಂದೂ ಎರಡ ಬಗೆಯೋ ದಿಲ್ಲರಿ”
ಅಂತ ಹನುಮಪ್ಪನ ಬೂದೀ ಮುಟ್ಟೀರಿ, ನೆನಪೈತಿಲ್ಲ?
ಇನ್ನೊಬ್ಬ : ಆತ ಬಿಡ್ರೆಪಾ
(ಒಮ್ಮೆಲೆ ಅವರ ಮಧ್ಯದಲ್ಲಿ ಬಸಣ್ಯಾ ಮೇಲಿನಿಂದ ಜಿಗಿಯುತ್ತಾನೆ.
ಎಲ್ಲರೂ ಗಡಬಡಿಸಿ ಎದುರಿಸಬೇಕೆನ್ನುವಷ್ಟರಲ್ಲಿ ಬಸಣ್ಯಾ ಬಂದೂಕು
ಕಡಿದುಕೊಂಡಿರುತ್ತಾನೆ. ಎಲ್ಲರೂ ಹೆದರಿ
ಚೆಲ್ಲಾಪಿಲ್ಲಿಯಾಗುತ್ತಾರೆ.)
ಬಸಣ್ಣ : (ಬಂದೂಕು ತೋರಿಸುತ್ತ)
ನಮ್ಮ ದೇವರ ಹೆಸರೇನ ಗೊತ್ತೈತಿ? ಢಂಢಂ ದೇವರು! ಇವಗ ಇಲ್ಲೊಂದ ಕುದರಿ
ಐತಿ. ಅದರ ಹಿಂದೊಂದ ಬೋಲ್ಟ್ ಐತಿ. ಎದುರಿಗಿ ಯಾರಿದ್ದರೂ ಸ್ವಾಮಿ
ಒಮ್ಮೆ ಢಂ ಅಂದರಾಯ್ತು, ಎದುರಿಗಿದ್ದವನು ಏನ ಮಾಡ್ತಾರ ಹೇಳ್ರಿ?
………… ಮರಿಹಾಕ್ತಾರ ಮರಿ. ಸೂಳೀ ಮಕ್ಕಳ್ರಾ, ಗೌಡ ಎಲ್ಲಿದ್ದಾನ
ಹೇಳ್ತೀರಲ್ಲ?
ಒಬ್ಬ : (ಹೆದರುತ್ತ)
ಶಾರೀ ಮನ್ಯಾಗ.
ಬಸಣ್ಣ : ನನ್ನ ಮುಗಸಬೇಕಂತ ಕಳಿಸಿದ್ದ ಹೌಂದಲ್ಲ?
ಒಬ್ಬ : ಬಸಣ್ಣಾ….
ಬಸಣ್ಣ : ನಮ್ಮಪ್ಪನ ಇಲ್ಲಿ ದೆವ್ವ ಕೊಂದಿತ್ತಲ್ಲ?
ಒಬ್ಬ : ಬಸಣ್ಣಾ ನಮ್ಮನ್ನ ಕೊಲ್ಲಬ್ಯಾಡೋ, ನಿನ್ನ ಕಾಲ ಬೀಳತೇವೋ!
ಇನ್ನೊಬ್ಬ : ಬಸಣ್ಣಾ, ತಪ್ಪಾಯ್ತೊ ಎಪ್ಪಾ, ನೀ ಹೇಳಿಧಾಂಗ ಕೇಳ್ತೀವೋ.
ಬಸಣ್ಣ : ಹೇಳಿಧಾಂಗ ಕೇಳ್ತೀರಿ?
ಇನ್ನೊಬ್ಬ : ಹೂನ s ಎಪ್ಪ.
ಬಸಣ್ಣ : ಹಾಂಗಾದರ ಕುಂಡೀ ಎಳಕೊಂಡ ಗೌಡಗ ಸುದ್ದೀ ಹೇಳಿ, ಅವನ ಚೌಕರಿ
ಬಿಡತೀರಿ?
ಒಬ್ಬ : ಬಂದೂಕ ಕೊಡ್ತಿ ಹಂಗಾದರ?
ಬಸಣ್ಣ : ಬಂದೂಕ ಬೇಕ?
(ಗುರಿ ಹಿಡಿಯುವನು)
ಎಲ್ಲರೂ : ಬ್ಯಾಡೋ ಎಪ್ಪಾ, ಬ್ಯಾಡೋ.
ಬಸಣ್ಣ : ಹೂ ಎಳಕೊಂಡ ಹೋಗ್ರಿ ಮತ್ತ. ಇನ್ನೊಮ್ಮಿ ಈ ಕಡೆ ಕಾಲ ಹಾಕಿದರ
ನಿಮ್ಮನ್ನ ಜೀವಸಹಿತ ಬಿಡಾಣಿಲ್ಲ s…..
(ಎಲ್ಲರೂ ಕುಂಡಿ ಎಳೆಯುತ್ತ ಹೋಗವರು. ಸ್ವಲ್ಪ ಹೊತ್ತು ಅತ್ತಿತ್ತ
ಅಡ್ಡಾಡಿ, ಅವರು ಬಿಟ್ಟು ಹೋದ ಕಂಬಳಿ ಹೊತ್ತುಕೊಂಡು ಗುಡಿಸಲಲ್ಲಿ
ಮಲಗುತ್ತಾನೆ. ತುಸು ಹೊತ್ತಾದ ಬಳಿಕ ಗೌಡ್ತಿ ಊಟ ತಗೊಂಡು ಬರುತ್ತಾಳೆ.)
ಗೌಡ್ತಿ : ಆಳಿಗಿ ಹೇಳಿಕಳಸದ s ಒಂದ ಗಳಿಗಿ ನೀನ s ಮನೀಗ ಬಂದಿದ್ದರ
ಏನಾಗತಿತ್ತು? ಊಟ ಮಾಡಿ ಬರತಿರಲಿಲ್ಲಾ? ಬಸಣ್ಯಾನ ಜೋಡಿ ಜಗಳಾ
ಮಾಡಿದೆಂತ, ಇಲ್ಲಿ ಬಂದೆಂತ. ಜಗಳಾ ನಾಳಿ ಮಾಡಿದ್ದರ ಆಗತಿರಲಿಲ್ಲಾ?
ಎಷ್ಟ ಹೇಳೇನಿ ಇಂದ ಬರಾಕ s ಬೇಕ ಊಟಕ್ಕಂತ. ಮುದ್ದಾಂ ತಪ್ಪಿಸಿಧಾಂಗ
ಮಾಡತಿ, ಏಳ ಊಟ ಮಾಡೇಳ.
(ಗುಡಿಸಲ ಅಸ್ಪಷ್ಟ ಬೆಳಕಿನಲ್ಲಿ ಊಟ ಬಡಿಸುವಳು. ಬಸಣ್ಣ ಸುಮ್ಮನೇ ಊಟಾ
ಮಾಡುವನು.)
ಹೊರಗ ಹೆಂತಾ ಚೆಂದ ಬೆಳದಿಂಗಳೈತಿ. ಹೊರಗ ಬಂದ ಉಣಬಾರದ? ಗೌಡಾ, ನನ್ನ
ಖುಷಿ ಹೆಂಗ ಹೇಳಲಿ? ನಮ್ಮ ಚಂದ್ರನ್ನ ನೋಡೋ ಗೌಡಾ, ಹೆಂಗ ದೊಡ್ಡಾವಾಗಿ
ಮೂಡ್ಯಾನ! ಏನೋ ಗಿಣೀ ಹಾಂಗ ಕೂಗತೈತಿ! ಅದ್ಯಾವ ಹಕ್ಕಿ? ಯಾಕ
ಮಾತಾಡವೊಲ್ಲಿ? ನಾ ಒಬ್ಬಾಕೀನ s ಮನೀ ಬಿಟ್ಟ ಬಂದದ್ದಕ್ಕ ಸಿಟ್ಟ
ಮಾಡೀದೀ ಹೌಂದಲ್ಲ? ಗೌಡಾ, ನನ್ನ ಕರಳ ಬ್ಯಾನಿ ಹೆಂಗ ತಿಳಸಲಿ? ನೀ
ಮೊದಲ s ಗಂಡಸು; ಮಕ್ಕಳ ಬ್ಯಾಡಾ, ಮನೀ ಬ್ಯಾಡ, ಇದ್ದೇನಂತೀ ಒಂದ s
ಗೂಗೀಹಾಂಗ. ನಾ ಎಷ್ಟಂದರೂ ಹೆಂಗಸು. ಮಕ್ಕಳಿಲ್ಲದ ಹೆಂಗಿದ್ದೇನು?
ಬಸಣ್ಯಾನ ಹಂತ್ಯಾಕ ಒಂದ ಗಿಣಿ ಐತೆಂತ, ಬಸ್ಸಿ ಹೇಳಿತಿದ್ಲು. ಮಂದೀ
ಗಿಣಿ ನಮ್ಮ ಗಿಣಿ ಹೆಂಗಾದೀತು? ನಮ್ಮ ಗಿಣಿ ನನಗೀಗ ಕಣ್ಣಮುಂದ ಕಾಣಾಕ
ಹತ್ತೇತಿ! ಇನ್ನ s ಉಣ್ಣೋದ ಮುಗೀಲಿಲ್ಲೇನ ಅಂದರ?
(ಬಸಣ್ಣ ಗೌಡ್ತಿಯ ಸರಗು ಹಿಡಿದೆಳೆಯುವನು. ಗೌಡ್ತಿ ಸಂಭ್ರಮಿಸುತ್ತ
ಹೊರಗೋಡಿ ಬರುವಳು. ಹಾಡು ಸಾಗುತ್ತಿದ್ದಂತೆ ಬೆಚ್ಚಿ
ತಪ್ಪಿಸಿಕೊಳ್ಳಲೆತ್ನಿಸುವಳು.)
ಬಸಣ್ಣ :
ಏನ ಬಗಿ ಬಯಲಕ ಬಿದ್ದೆ ಭಾಳ ದಿನಾಕ
ಹುಣಿವೀ ಚಂದ್ರ ಮೂಡಿಧಾಂಗ ಮರತೇಕಾ
ಕಣ್ಣೀಗಿ ದೀಪಾ ಹಚ್ಚಿಧಾಂಗ ನಿನ್ನ ಬೆಳಕಾ||
ತೋಳ ತೊಡಿ ನಿವಳ ಸುದ್ದಾ ಬಾಳಿದಿಂಡಾ
ಎದೀಮ್ಯಾಗ ನಿಂಬಿಹಣ್ಣಾ
ಬಂದ s ಸಿಕ್ಕೆ ಕೈಲಾಸ ಹರದ ಬಿದ್ಧಾಂಗ||
ಏನ ಹೆಣ್ಣ ಏನ ಬಣ್ಣ ನಡ ಸಣ್ಣಾ
ಮಾವಿನ ಹೋಳಿನಂಥಾ ಕಣ್ಣಾ
ಕೈಯ ಮ್ಯಾಲ ಕೈಯ ಹೊಡದ ಬಾರ s ಕೂಡೋಣ||
ಗೌಡ್ತಿ : ಯಾಕೋ ಚೆಲುವಾ? ಯಾರ ಮುಂದ ಮಾತಾಡ್ತಿ ಗೊತ್ತೈತಿಲ್ಲ?
ಗಂಡುಳ್ಳ ಗರತಿ, ಊರ ಗೌಡತೀನ ತರಿಬಿ ಕೇಳತಿ; ಎಚ್ಚರಿದ್ದೀಯಿಲ್ಲೋ? ಗೌಡ
ಎಲ್ಲಿದ್ದಾನ ಹೇಳತಿಯಿಲ್ಲ?
ಬಸಣ್ಣ : ಅಬಬಬ! ನಿನ್ನ ಸರದಾರ ಗೌಡ ಬೇಕಾಗಿದ್ದಾ? ಊರಾಗೆಲ್ಲಾರ
ಬಿದ್ದಿರಬೇಕು; ಹುಡುಕ್ಕೋಹೋಗು.
ಗೌಡ್ತಿ : ಈ ಕಂಬಳಿ ಹೆಂಗ ಬಂತ ನಿನ್ನ ಹಂತ್ಯಾಕ?
ಬಸಣ್ಣ : ನಮ್ಮಪ್ಪನ್ನ ಕೊಲ್ಲಿಸಿಧಾಂಗ ನನ್ನ ಕೊಲ್ಲಸಬೇಕಂತ ನಾಕ ಮಂದಿ
ನಾಯಿಗಳನ್ನ ಕಳಿಸಿದ್ದಾ. ಅವರೆಲ್ಲಾ ಹೆದರಿಕೊಂಡ ಬಂದೂಕ ಕಂಬಳಿ ಬಿಟ್ಟ
ಹೋದರು.
ಗೌಡ್ತಿ : ಇಂಥ ಪುಂಡ ನೀ ಯಾವನೋ? ಹೆಸರೇನ? ಕುಲ ಏನ? ಗೋತ್ರ ಏನ? ಹೇಳು.
ಬಸಣ್ಣ : (ನಗುತ್ತ)
ಮಾತಿನಾಗ ಹೇಳಲೊ? ಹಾಡಿನಾಗ ಹೇಳಲೊ?
ಗೌಡ್ತಿ : (ಹೆಜ್ಜೆ ಮುಂದಿಟ್ಟು)
ಹಲ್ಲ ಕಿಸೀಬ್ಯಾಡ. ಜೀವದ ಮ್ಯಾಲಿನ ಆಸೇ ಬಿಟ್ಟ ಹೇಳ ನನ್ನ ಕಾಲಿಗಿ.
ಬಸಣ್ಣ :
ಕಾಲಗೆಜ್ಜಿ ಝಣಾ ಝಣಾ ಹೆಜ್ಜಿ ಎದಿಮ್ಯಾಗ ಚೆಲ್ಲಿ
ಕೇಳತೀ ನಮ್ಮ ಹೆಸರಾ
ನಮ್ಮ ಹೆಸರಾ
ನಮ್ಮ ಹೆಸರ ಬರಕೊಳ್ಳ ನಿನ್ನ ಎದಿಯೊಳಗ||
ಊರ ಬಾಲೇರ ಬಾಯಿತುಂಬ ನಮ್ಮ ಹೆಸರಾ
ಅವರು ಹೇಳತಾರ
ಬಾಲೇರ ಕರೀತಾರ
ಬಾ ಬಾರೊ ಬಸಣ್ಯಾ ಮಾವ||
ಊರ ಗರತೇರ ಬಾಯಿತುಂಬ ನಮ್ಮ ಹೆಸರಾ
ಕದ್ದ ಕರೀತಾರ
ಕದ್ದ ಹೇಳತಾರ
ಬಂದ ಹೋಗೋ ಬಸಣ್ಯಾ ದೊರಿ||
ಊರ ಮುದಿಕೇರ ಬಾಯಿತುಂಬ ನಮ್ಮ ಹೆಸರಾ
ಅವರು ಹೇಳತಾರ
ಅವರು ಕರೀತಾರ
ಬಂದ ಹೋಗೋ ಜೋಕುಮಾರಾ||
ಹುಡಿಗಿ ನಾ ಹೇಳಿದ್ದಾದರೂ ತಿಳದ ಬಂತೇನ? ಊರ ಬಾಲೇರಿಗೆಲ್ಲಾ ನನ್ನ
ಹೆಸರು ಬಸಣ್ಯಾ ಅಂತ ಗೊತ್ತು. ಗರತೇರಗಿ ಗೊತ್ತು. ಮ್ಯಾಲ ಮುದಿಕೇರಿಗಿ
ಗೊತ್ತು. ಗೊತ್ತಿದ್ದೂ ಹಗರಣಾ ಮಾಡಬ್ಯಾಡ. ಅಂತಃ ಕರಣದಿಂದ ಬಾಯಿ ತೆರದ
ಕೇಳತೇನು. ಇಲ್ಲನ್ನಬ್ಯಾಡ, ಗುಡಸಲಕ ಬಂದ ನಾಕ ಮಾತ ಮಾತಾಡಿ, ಎಲೀ
ಅಡಿಕಿ ತಿಂದ ಹೋಗಂತಿದ್ದೇನ್ನೋಡು.
ಗೌಡ್ತಿ :
ಇದು ಯಾರದವ್ವ ಮಾನಗೇಡಿ ಮೂಳಾ
ಬಾಯಾಗ ಇಲ್ಲ ತಾಳಾ
ತಿನ್ನಾಕ ಇಲ್ಲ ಕೂಳಾ
ಮುಂದ ನಿಂತ ಜೊಲ್ಲ ಸುರಿಸಿ ನೆಕ್ಕೀತ ನನ್ನ ಕಾಲಾ||
ನಾ ಗಂಡುಳ್ಳ ಗರತಿ ಶೀಲವಂತಿ
ಮೈಮ್ಯಾಲ ಏರಿ ಬರತಿ
ತಿವದೇನೋ ಮೋತಿ ಮೋತಿ
ಬಾಯಿ ತೊಳದ ಮಾತನಾಡೋ ಕಿತ್ತೇನೋ ನಿನ್ನ ಮೀಸಿ||
ನಾವು ಊರ ಗೌಡರು ಸಾವ್ಕಾರ
ಗಂಡ ಸರದಾರ
ಕೇಳುವುದಲ್ಲೋ ತರಾ
ಕಡದಾನೊ ಹಾಡಾಹಗಲಿ ಮಾಡ್ಯಾನೊ ಚೂರ ಚೂರಾ||
ಬಸಣ್ಣ : ಓಹೊಹೊಹೊ! ನಿನ್ನ ಸರದಾರ ಗಂಡನ ಸುದ್ದೀ ಹೇಳಿದೀ? ನಿನ್ನ
ಬಾದ್ದೂರ ಗಂಡನ ಸುದ್ದಿ ಹೇಳಿದೀ? ಯಾವ ನಿನ್ನ ಗಂಡ? ತಾನೂ ಗಂಡಸಂತ
ತೋರಿ ಸೋದಕ್ಕ ಊರ ಎಳದೆಳದ ಓಡಿ ಹೋಗ್ತಾನ, ಅವನ s ಅಲ್ಲೇನ ನಿನ್ನ ಗಂಡ?
ಸೂಳೇರ ಮೀಸಲಾ ಮುರಿಯೋ ದಿನ, ಕಂಬಳಿ ಹೊತ್ತ ಮಲಗತಾನ, ಅವನ s ಅಲ್ಲೇನ
ನಿನ್ನ ಬಾದ್ದರು? ಹೇಂತಿ ಹತ್ತ ವರ್ಷ ಬಾಯಿ ತೆರದರೂ ಒಂದ ಮಾತಾಡೊ ಗಿಣಿ
ತರಲಿಕ್ಕಾಗಲಿಲ್ಲ. ಅವನ s ಅಲ್ಲೇನ ನಿನ್ನ ಗಂಡ?
ಹುಡಿಗಿ ಬಾಯಿ ತೆರೆದ ಚಾಲಿವರದ
ಗಂಟ ಬಿದ್ದೇನ ನಾನಾ |
ಪಂಟ ಹೇಳಬ್ಯಾಡ ನಗನಗತ
ತೋರಿಸ ದಯ ಕರುಣಾ ||
ಈ ಜನಮದಾಗ ಏನೈತಿ
ಹತ್ತೇತಿ ನಿನ್ನ ಭ್ರಾಂತಿ |
ಒಲ್ಲಿನೆನಬ್ಯಾಡ ಕರಕೊಳ್ಳ
ನೀ ಯಾವ ದೊಡ್ಡ ಗರತಿ ||
ನಿನ್ನ ಅಂಗೈಯಾಗ ಹಿಡಕೊಳ್ಳ
ಆಡಿಸ ನನ್ನ ಪ್ರಾಣಾ |
ನೆವ ಹೇಳಬ್ಯಾಡ ಓಡಿ ಬಂದ
ಮಾಡಾಕ ಗೆಳಿತಾನಾ ||
ಗೌಡ್ತಿ: ಬಸಣ್ಣಾ, ಕಾಣಾ ಕಾಣಾ ಇಂಥಾ ಪಾಪಕ ಹೆಂಗ ಮನಸ ಮಾಡಿದಿ?
ಹೇಳ್ತೇನ ಕೇಳು.
ಬಸಣ್ಣ : ಹುಡಿಗೀ ಚೆಂದದಿಂದ ಹೇಳುವಂಥವಳಾಗು.
ಗೌಡ್ತಿ :
ಅನ್ಯರ ಹೆಣ್ಣೊ ನಾನಾ
ಕರಿಬ್ಯಾಡೊ ಬಸಣ್ಣಾ ನನ್ನ
ಏನಾದ ಗೊತ್ತಿಲ್ಲೇನೋ ರಾವಣ||
ನಗಿ ಮಾಡಿ ಓಡಿ ಬಂದಿ
ಕೈಯೊಡ್ಡಿ ಬಾಯಿ ತೆರದಿ
ತಿಳಕೊಳ್ಳೊ ಬುದ್ಧಿಗೇಡಿ ರೀತಿ ನಡತಿ||
ಗಂಡುಳ್ಳ ಗರತಿ ನಾನಾ
ಹರಸೀಯೋ ಒಗತಾನಾ
ಪುಣ್ಯ ಪಾಪ ತಿಳಕೊಳ್ಳೊ ಹೈವಾನ||
ಬಸಣ್ಣ : ಜೋಕುಮಾರ ಸ್ವಾಮಿಯ ಪಲ್ಲೇವ
ಉಂಡಮ್ಯಾಗೆಲ್ಲಿ ಪುಣ್ಯೇವ ಪಾಪ
ನಮಗ ಹೇಳಬ್ಯಾಡ
ನಮಗ ತೋರಬ್ಯಾಡ ಶಾಸ್ತ್ರದ ಹಳಿಗಂಟ||
ನಾನು ಓದೇನ ಪುಸ್ತಕ ನೂರಾರಾ
ಎಲ್ಲಾ ಹೇಳತಾವ
ಎಲ್ಲಾ ಹೇಳತಾವ ಕೂಡಬೇಕ ಗಂಡಾಹೆಣ್ಣಾ||
ತಗೊ ಕೊಡತೇನ ನನ್ನ ಹಳಿ ರುಂಬಾಲಾ
ಗಂಟ ಕಟ್ಟಿ ಇಡ
ಗಂಟ ಕಟ್ಟಿ ಇಡ ಶಾಸ್ತ್ರದ ಪ್ರಸ್ತೇಕ||
ಹುಡಿಗೀ ನಾ ಹೇಳಿದ್ದಾದರೂ ತಿಳದ ಬಂತೇನ? ಜೋಕುಮಾರ ಸ್ವಾಮೀ ಪಲ್ಲೆ
ಉಂಡಮ್ಯಾಲ ಪುಣ್ಯೆ ಎಲ್ಲಿ? ಪಾಪ ಎಲ್ಲಿ? ಬಂದ ಜೋಕುಮಾರ ಸ್ವಾಮೀ
ಪಲ್ಲೆ ಉಣಿಸಿದಿ: ಬಿಟ್ಟೇನು? ನೀ ನಿಡಿದ್ದ ಉಂಡಮ್ಯಾಲ s ಅಲ್ಲೇನ
ಇಷ್ಟೆಲ್ಲಾ ? ಮಾತಾಡೋ ಗಿಣಿ ಇದ್ದವರನ್ನ ಬಿಡತಿ, ಎಲ್ಲೆಲ್ಲೋ ಹುಡಕತಿ,
ಹೆಂಗ ಸಿಕ್ಕೀತು? ಬಾ, ಗೆಣಿತಾನ ಮಾಡ, ಬೇಡು ಎಂಥಾವ ಬೇಕ ಅಂಥಾ ಹಕ್ಕಿ-
ಕಾದ ಮೇದ ಹೆಣ್ಣ ನೀನಾ ನೋಡವಲ್ಲಿ
ಕರೀತೇನ ಕಾಲಬಿದ್ದಾ ಬಾ ಬಾರ s ಪೋರಿ|
ಹಾರ್ಯಾಡು ಹಕ್ಕಿಯ ಹಿಡದ ಕೊಟ್ಟೇನ ನಿನಗಾ
ಮಾತಾಡೊ ಅರಗಿಣಿಯ ತಂದ ಕೊಟ್ಟೇನ ನಿನಗಾ
ಮುಡಿಸೇನ ಹೂವಾ ಚಿಗುರಾ| ಎಲೆ ಹುಡಿಗಿ
ಕರೀತೇನ ಕಾಲಬಿದ್ದಾ ಬಾ ಬಾರ s ಪೋರಿ||
ಹೌದಂಬೊ ಹಂಗಾಮ ಹುಣ್ಣಿಮಿ ಚಂದ್ರಾಮ
ಬಿಡ ಬಿಡ ಬಡಿವಾರ ಕೇಳ ಹಕ್ಕಿಯ ಹಾಡ
ಬೀಸ್ಯಾವ ಮೂಡಗಾಳಿ| ಎಲೆ ಹುಡುಗಿ
ಕರೀತೇನ ಕಾಲ ಬಿದ್ದಾ ಬಾ ಬಾರ s ಪೋರಿ||
ಹುಡಿಗೀ ತಿಳೀತೇನ? ಹತ್ತ ವರ್ಷ ಹಕ್ಕಿ ಬೇಕಂತ ಹಂಬಲಿಸಿದಿ. ಹಕ್ಕಿ
ಹಾರಿ ಬಂದ ತೊಡೀ ಮ್ಯಾಲ ಕುಂತೇನನ್ನೋ ಕಾಲಕ್ಕ ಬ್ಯಾಡಂತಿ! ಏನ ಕರಳ
ನಿಂದಾ?
ಗೌಡ್ತಿ : ಏನ ಮಾಡ್ತಲಿ? ಒಮದ ಕಡೆ ಹಾಡೋ ಹಕ್ಕಿ, ಇನ್ನೊಂದ ಕಡೆ ಕಣ್ಣಾಗ
ಚೂರಿ ಇಟ್ಟಕೊಂಡ ಗಂಡ! ಬಸಣ್ಣಾ, ನಡುವ ನೀ ಬಂದ ಯಾಕ ಜೀವಾ ಕೊಡತಿ? ನನ್ನ
ಎಡ್ಯಾಗ ಇದ್ದದ್ದ ಉಣ್ಣತೇನು? ಸುಮ್ಮನ ದಾರಿ ಬಿಡ.
ಬಸಣ್ಣ : ನನ್ನ ಎಡ್ಯಾಗಿದ್ದದ್ದ ಉಂಡಮ್ಯಾಲ s ಅಲ್ಲೇನ ಇಷ್ಟೆಲ್ಲಾ
ಆದದ್ದು? ಹೋಗತಿದ್ದರ ಹೋಗು ಬ್ಯಾಡನ್ನಾಣಿಲ್ಲ. ನಾನೂ ಒಲ್ಲೆನ್ನೋ
ಹೆಣ್ಣ ಎಳದಾವಲ್ಲ. ಹಾಂಗ s ಹೋಗೋವಾಗ ಹೊಲೇರ ಶಾರೀ ಮನೀಗಷ್ಟ ಹೋಗು; ಗೌಡ
ಬಿದ್ದಾನ ಎಬ್ಬಿಸಿಕೊಂಡ ಹೋದೀಯಂತ.
ಗೌಡ್ತಿ : ಹೊಲಕ್ಕ ಮಲಗಾಕ ಹೋಗತೇನಂದ ಅಲ್ಲಿ ಹೆಂಗಹೋಗಿ
ಬಿದ್ದಿದ್ದಾನು!
ಬಸಣ್ಣ : ನಿನಗ ಇನ್ನೊಂದ ಸುದ್ದಿ ತಿಳಿದಿಲ್ಲ. ಗೌಡಗ ಈಗ ಗುರುಪಾದನ
ಮಗಳು ನಿಂಗಿ ಬೇಕಾಗ್ಯಾಳಂತ!
ಗೌಡ್ತಿ : ಏನಂದಿ?
ಬಸಣ್ಣ : ಅಲ್ಲೇ ಶಾರೀನ ಕೇಳ್ಹೋಗು.
(ಗಿಣಿ ಚೀರಿದ ಸದ್ದು)
ಗೌಡ್ತಿ : ಗುಡಸಲದೊಳಗ ಯಾವುದೋ ಹಕ್ಕಿ ಚೀರಿಧಾಂಗಾಯ್ತಲ್ಲಾ?
ಬಸಣ್ಣ : ಅದ s? ನನ್ನ ಮಾತಾಡೋ ಗಿಣಿ. ರಾತ್ರಿ ಇಲ್ಲೆ
ತಂದಿಟ್ಟಕೊಂಡಿದ್ದೆ, ಪಂಜರ ಉರುಳಿಬಿತ್ತೊ, ಹಾವ ಕಂಡಿತೊ!
ಗೌಡ್ತಿ : ಲಗು ಹೋಗಿ ಏನಾಗೇತಿ ನೋಡಿ ಬಾ.
ಬಸಣ್ಣ : ನಿನಗ s ಬ್ಯಾಡಾದ ಮ್ಯಾಲ ಗಿಣಿ ಇದ್ದರೆಷ್ಟು ಬಿಟ್ಟರೆಷ್ಟು?
ಗೌಡ್ತಿ : ಬ್ಯಾಡಂತ ನಾ ಎಲ್ಲಿ ಹೇಳಿದೆ?
ಬಸಣ್ಣ : ಬಾ ಹಂಗಾದರ
(ಗುಡಿಸಿಲಲ್ಲಿ ಹೋಗಿ ಗಿಣಿಯುಳ್ಳ ಪಂಜರ ತರುತ್ತಾನೆ. ಗೌಡ್ತಿ ನೋಡಿ
ಸಂಭ್ರಮಿಸುತ್ತಾಳೆ.)
ಗೌಡ್ತಿ : ಏನಾಗಿಲ್ಲ ಹೌಂದಲ್ಲ?
ಬಸಣ್ಣ : ಏನಿಲ್ಲ
ಗೌಡ್ತಿ : ಇದ ಮಾತಾಡತೈತಿ?
ಬಸಣ್ಣ : ನೀ ಇನ್ನೂ ಇದರ ಮಾತ ಕೇಳಿಲ್ಲ. ಇದರ ಮಾತ ಕೇಳಿ ಬೆರಗಾಗಿ ಊರ
ಹುಡಿಗೇರ ಹಾಂಗ s ಬಾಯ್ತಗೀತಾರ! ಎಂತೆಂಥಾ ಕತೀ ಹೇಳತೈತಿ!
ಗೌಡ್ತಿ : ಇನ್ನ ನನಗ ಮಾತ್ರ ಈ ಗಿಣೀ ಮಾತು ಕತೀ ಕೇಳಿಸಬೇಕು – ಬಸಣ್ಯಾ,
ಬಸಣ್ಯಾ-
ಗುಡಿಸಲದೊಳೀಕ!
ಪ್ರಿಯಾ ಒಳೀಕ
ಹೋಗೋಣು ನಡಿ
ಮಾತನಾಡೋಣ ಹಕ್ಕಿಯ ಜೋಡಿ||
ಮೂಡಗಾಳಿ ಬೀಸ್ಯಾವೊ
ಹೂವ ಹಸರ ಚಿಗುರ್ಯಾವೊ
ಕೇಳಿ ಬಂದಾವೊ ಹಕ್ಕಿಯ ಹಾಡಾ
ಮಾತನಾಡೋಣ ಹಕ್ಕಿಯ ಕೂಡಾ||
(ಸಂಗೀತ)
ಜೋಕುಮಾರ ಸ್ವಾಮಿ (ನಾಟಕ) : ಢಂಢಂ
ದೇವರು
ಮೇಳ :
ಒಂದ ಊರಾಗಿದ್ದಾನ್ರಿ ಒಬ್ಬ ಗೌಡ
ಊರಾಗ ದೊಡ್ಡ ಪುಂಡಾ
ಅವನ ಹೊಟ್ಟಿ ಗುಂಡಾ
ತಿರಗತಾನ ಯಾವತ್ತು ಬಂದೂಕ ಹಿಡಕೊಂಡಾ ||
ಊರ ಭೂಮಿ ಸೀಮಿಯಾ ಯಜಮಾನ
ಬಂಗಾರ ಬೆಳ್ಳಿ ಚಿನ್ನ
ಚೆಂದುಳ್ಳ ನಿವಳ ಹೆಣ್ಣಾ
ಎಲ್ಲಾನು ತನ್ನದಂತ ಹೇಳ್ಯಾನ್ರಿ ಹೈವಾನ ||
ಅವನಿಗಿದ್ದಾಳ್ರಿ ಒಬ್ಬ ಶ್ರೀಮತಿ
ಕರೆಯೋಣ ಗೌಡತಿ
ಚೆಂದ ಆಕೃತಿ
ಬಾಯಿ ತೆರದ ನೋಡತಾಳ್ರಿ ಹಾರ್ಯಾಡುವ ಹಕ್ಕಿ ||
(ಹಾಡು ಮುಗಿಯುತ್ತಿದ್ದಂತೆ ಗೌಡ ನಾಲ್ಕು ಜನರ ಮೇಲೆ ಬಂದೂಕು ಹೊರಿಸಿಕೊಂಡು ವೈಭವದಿಂದ,
ಪ್ರೇಕ್ಷಕರ ಮಧ್ಯದಿಂದ ಬರುತ್ತಾನೆ. ಬಂದೂಕು ಹೊತ್ತವರು, “ಸ್ವಾಮಿ ನಮ್ಮಯ್ ದೇವರೊ! ಢಂ
ಢಂ ಇವರ ಹೆಸರೊ||” ಎಂದು ಹಾಡಿಕೊಂಡು, ನರ್ತಿಸಿಕೊಂಡು ಬರುತ್ತಾರೆ)
ಸೂತ್ರಧಾರ : ಅಪ್ಪಾ, ಸುತ್ತ ಪರಿವಾರದೊಂದಿಗೆ ಬಂದಿರತಕ್ಕಂಥಾ ಧೀರಾ,
ನೀನು ಧಾರು? ನಿನ್ನ ನಾಮಾಂಕಿತವೇನು? ಚೆಂದದಿಂದ ಹೇಳುವಂಥವನಾಗು.
(ಗೌಡ ನಾಲ್ಕು ಜನರ ಕಡೆಗೆ ನೋಡಿ, ಸೂತ್ರಧಾರನಿಗೆ ಉತ್ತರಿಸಲು ಸೂಚಿಸಿ ಮಂಚದ ಮೇಲೆ ಕೂರು
ತ್ತಾನೆ. ನಾಲ್ವರೂ ಬಂದೂಕು ತಂದು ಸೂತ್ರಧಾರನ ಮುಂದೆ ನಿಲ್ಲಿಸಿ ಅದರ ತುದಿಗೊಂದು ರುಂಬಾ
ಲನ್ನಿಟ್ಟು ಪರಸ್ಪರ ನಗುತ್ತಾರೆ.)
ಒಬ್ಬ : ಇವರು ಯಾರಂದರ…..
ಎಲ್ಲರೂ :
ಸ್ವಾಮಿ ನಮ್ಮಯ್ ದೇವರೊ
ಢಂಢಂ ಇವರ ಹೆರೊ||
ಸೂತ್ರಧಾರ : ಇವರ ಹೆಸರ ಢಂಢಂ? ಕೂತಂಥಾ ಸಭಿಕರು ಕಾತರರಾಗಿದ್ದಾರೆ.
ಇವರ್ಯಾರು? ಇವರೇನ ಮಾಡತಾರ? ಸವಿಸ್ತಾರ ಕಥನಾ ಮಾಡಿ ತಿಳಸುವಂಥವನಾಗು.
ಒಬ್ಬ : ಇವರಿಗೆ ಒಂದ ಕುದರಿ ಐತಿ. ಅದರ ಹಿಂದೊಂದ ಬೋಲ್ಟ ಐತಿ. ಗುರಿ
ಹಿಡದ ಕುದರಿ ಎಳದರ ಸಾಕು, -ಎದುರಿಗೇನಿದ್ದರೂ ಢಂ ಅಂತ ಒಮ್ಮಿ
ಕುಣೀತಾರ; ಮುಗೀತು! ಇಂಥಾ ಮಹಾಸ್ವಾಮಿ ನಮ್ಮ ದೇವರು!
ಎಲ್ಲರೂ :
ಸ್ವಾಮಿ ನಮ್ಮಯ್ ದೇವರೊ
ಢಂಢಂ ಇವರ ಹೆಸರೊ||
ಇನ್ನೊಬ್ಬ : ಯುದ್ದದೊಳಗ ಸೈನಿಕರು ಬರೀ ಹೆಣದ ಮ್ಯಾಲ ಹಾರಸ್ತಾರಂತ,
ನಮ್ಮ ದೇವರು-ಊಹೂ! ಗಟ್ಟಿಮುಟ್ಟ ಬಾಳೇವಂತರ s ಆಗಬೇಕು. ಒಂದ ದಿವಸ ಒಬ್ಬ
ರೋಗಿಷ್ಟನ ಮ್ಯಾಲ ಹಾರಿದರು-ಅದೆಲ್ಲೋ?
ಮತ್ತೊಬ್ಬ : ಅದ s? ಆ ದೆವ್ವಿನ ಹೊಲದಾಗೊ!
ಇನ್ನೊಬ್ಬ : ಹೂ. ಆ ದೆವ್ವಿನ ಹೊಲದಾಗ ಹಾರಿದರು. ರೋಗಿಷ್ಟನ ಮ್ಯಾಲ
ಹಾರೋವಾಗ ನಮ್ಮ ಸ್ವಾಮಿ ಕುಣೀಲಿಲ್ಲ, ಹಾಡಲಿಲ್ಲ, ಢಂ ಅನ್ನಲಿಲ್ಲ, ಮೂರ
ದಿನಾ ಮಾತಾಡಲಿಲ್ಲ. ಹೋಗಲಿ ಅಂತ ಒಂದ ದಿನಾ ಹಾಡಾ ಹಗಲಿ ಹೊಲದಾಗ ಕೆಲಸಾ
ಮಾಡೋ ಡಜನ್ ಹೊಲೇರನ್ನ ಸಾಲಾಗಿ ನಿಲ್ಲಿಸಿ ಹಾರಿದರು. ಸ್ವಾಮಿ
ಕುಣಿದಾಡಿ ಒಮ್ಮೆ ಢಂ ಅಂದರ ಏನುಳೀತ ಹೇಳ್ನೋಡೋಣು?
ಸೂತ್ರಧಾರ : ಒಂದ ಡಜನ್ ಹೆಣಾ!
ಇನ್ನೊಬ್ಬ : ಊಹೂ! ಬ್ಯಾರೇದವರು ಹಾರಿದರ ಹೆಣ ಬೀಳತಾವ. ನಮ್ಮ ಢಂ ಢಂ
ಸ್ವಾಮಿ ಹಾರಿದರ ಇಷ್ಟ ಬೂದಿ; ತಟಕ್ ಹೊಗಿ! ನಮ್ಮ ಸ್ವಾಮೀ ಮಹಿಮಾ
ಏನ್ಹೇಳೋಣು!
ಎಲ್ಲರೂ :
ಸ್ವಾಮಿ ನಮ್ಮಯ್ ದೇವರೊ
ಢಂ ಢಂ ಇವರ ಹೆಸರೊ||
ಸೂತ್ರಧಾರ : ಇದೆಲ್ಲಾ ಹೌಂದಪಾ, ನಿಮ್ಮ ಸ್ವಾಮೀ ಸ್ವರೂಪ ಏನು?
ಮಗದೊಬ್ಬ : ನಮ್ಮ ಸ್ವಾಮಿ ಢಂ ಢಂ ದೇವರಂದರ ಒಂದ ದೊಡ್ಡ ಹೊಟ್ಟಿ. ಏನ
ತಿಂದರೂ ಅರಗಸ್ತಾರ. ನಿಮ್ಮಂಥವರಿಗೆ ಎರಡು, ಬ್ಯಾಡಾ ನಾಕ ರೊಟ್ಟಿ
ಕೊಟ್ಟರ ಅಜೀರ್ಣ ಆಗತೈತಿ. ನಮ್ಮ ಸ್ವಾಮಿ ಮನಶೇರ ಮಾಂಸ ತಿಂದ ಅರಗಿಸಿ
ಕೊಳ್ತಾರ! ಕೋಳಿ ಸಿಕ್ಕರಂತೂ ಹಬ್ಬಾ ಮಾಡತಾರ! ಅಂಥಾ ನಮ್ಮ ಸ್ವಾಮಿ-
ಎಲ್ಲರೂ :
ಸ್ವಾಮಿ ನಮ್ಮಯ್ ದೇವರೊ
ಢಂ ಢಂ ಇವರ ಹೆಸರೊ||
ಗೌಡ : ಏನಪಾ ಸೂತ್ರಧಾರ ನಾ ಯಾರಂತ ಈಗಲಾದರು ತಿಳೀತೋ?
ಸೂತ್ರಧಾರ : ಸ್ವಾಮೀ, ತಾವು ಯಾರಂತ ನನಗಾದರು ತಿಳೀತು, ಕೂತಂಥಾ
ಸಮಾಜವಾದಿ ಗಳಿಗಾದರು ತಿಳಿದಬಂತು.
(ನಿಧಾನವಾಗಿ ಬಂದ ಬಸಣ್ಯಾನನ್ನು ತೋರಿಸಿ)
ಈತ ಯಾರು? ಅದ್ಯಾಕ ಹಿಂಗ ನಿಂತಾ?
ಒಬ್ಬ : ಇದು ನಮ್ಮ ಢಂಢಂ ದೇವರು ತಿನ್ನೋ ರೊಟ್ಟಿ.
ಇನ್ನೊಬ್ಬ : ಅಲ್ಲಲ್ಲ. ನಮ್ಮ ಢಂಢಂ ದೇವರಿಗೆ ಹರಕೆ ಬಿಟ್ಟ ಕುರಿ
ಮತ್ತೊಬ್ಬ : ಅಲ್ಲ, ನಮ್ಮ ದೇವರಿಗೆ ಹಾಲ ಕೊಡೊ ಹಸು.
ಗೌಡ್ತಿ : (ಒಳಗಿನಿಂದ ಬಂದು)
ಕೇಳಿದೇನ?
ಗೌಡ : ನಿಂದೇನ ಈ ಮಂದ್ಯಾಗ? ಆಮ್ಯಾಲ ಕೇಳತೀನಂತ ಹೋಗು.
ಮಗದೊಬ್ಬ : (ಗೌಡ್ತಿಯನ್ನು ತೋರಿಸುತ್ತ)
ಅದು ನಮ್ಮ ಢಂಢಂ ದೇವರ ಹೊಲಾ!
(ಗೌಡ್ತಿ ಒಳಹೋಗುವಳು)
ಸೂತ್ರಧಾರ : ಈತನಿಗೇನೂ ಹೆಸರ s ಇಲ್ಲೇನು?
ಒಬ್ಬ : ಹೆಸರ? ಇವನ ಹೆಸರೇನೊ?
ಬಸಣ್ಣ : ಬಸಣ್ಣ.
(ಗೌಡ ತಕ್ಷಣ ಏಳುವನು)
ಗೌಡ : ಬಸಣ್ಣ? ಬಾರೋ ಬಸಣ್ಣಾ… ಏ ಹೋಗ್ರೊ ಹೋಗ್ರೊ ಆಮ್ಯಾಲ ಬರ್ತೀರಂತ
ಹೋಗ್ರಿ. ಬಾರೊ ಬಸಣ್ಣಾ ಬಂದ ಹೊರಗ s ನಿಂತೀಯಲ್ಲೊ? ಬಾ ಬಾ ಒಳಗ ಕೂರ ಬಾ.
ಬೀಡಿ ಸೇದತಿಯೇನ?
(ನಾಲ್ವರೂ ರಂಗದ ಒಂದು ಬದಿಗೆ ಸರಿಯುವರು. ಸೂತ್ರಧಾರ ಮೇಳದೊಡನೆ ಒಂದಾಗುವನು)
ನಿಮ್ಮಪ್ಪ ಸತ್ತದ್ದ ಭಾಳ ಮನಸಿಗಿ ಹಚ್ಚಿಕೊಂಡೀಯೊ ಏನೊ! ನಿಮ್ಮಪ್ಪ
ಹೋದದ್ದಕ್ಕ ನನಗ ಹಳಹಳಿ ಆಗಿಲ್ಲಂತ ತಿಳೀಬ್ಯಾಡಪಾ ಮತ್ತ. ಏನ ಮುದುಕ
ಏನ ಮುದುಕ ನಿಮ್ಮಪ್ಪ! ದಿನ ಬೆಳಗಾದರ ಗೌಡರ s ಅಂತ ಬರತಿದ್ದಾ. ಬೀಡಿ
ಇಸಕೊಂಡ ಸೇದತಿದ್ದಾ. ಆದರ ಏನ ಮಾಡೋದು, ಮುದುಕ ಭಾರೀ ಹಟಮಾರಿ.
ಒಬ್ಬರಮಾತ ಕೇಳಾವಲ್ಲ. ಗಿಣೀಗಿ ಹೇಳಿಧಾಂಗ ಹೇಳಿದೆ: ಮುದುಕಾ ಆ
ಹೊಲದಾಗ ಮಲಗಬ್ಯಾಡೊ; ಅಲ್ಲಿ ದೆವ್ವ ಐತಿ. ಪಿಶಾಚಿ ಐತಿ, ಏಳ ಮಕ್ಕಳ
ತಾಯಿ ಐತಿ-ಅಂತ. ಕೇಳಿದನ s ನನ್ನ ಮಾತ? ಊಹೂ! ದೆವ್ವಾ, ಪಿಶಾಚಿ
ಮನಶೇರಷ್ಟ ಕೆಟ್ಟ ಇರಾಣಿಲ್ಲೊ ಹುಡುಗಾ ಅಂದ. ಹೋದ. ಬೆಳಿಗ್ಗೆದ್ದ
ಮಾತಾಡಿಸಬೇಕಂತ ಹೋದರ ನಿಮ್ಮಪ್ಪ ಅಲ್ಲೆಲ್ಲಿರತಾನ! ಕೂತ ಕೊಳ್ಳೋ,
ಹಾಂಗ s ನಿಂತ s ಇದ್ದೀಯಲ್ಲ. ನೀ ಅಷ್ಟೇನೂ ಚಿಂತೀ ಮಾಡಬ್ಯಾಡ. ನಮ್ಮ
ಮನ್ಯಾಗ ಇದ್ದೀಯಂತ ಬಿಡು.
ಬಸಣ್ಣ : ನಮ್ಮಪ್ಪ ಹೆಂಗ ಸತ್ತಂತ ನನಗ ಗೊತ್ತ ಐತಿ.
ಗೌಡ : ನಿನಗಷ್ಟ s ಏನ, ಊರಿಗೂರ s ತಿಳದೈತಿ. ಆ ಹೊಲದ ನೆಲ ಭಾಳ ಬಿರಸೈತಿ
ಅಂತ ಯಾರಿಗಿ ಗೊತ್ತಿಲ್ಲ? ನಿನ್ನ ಗುರ್ಯಾನ ಎರಡ ಕುರಿ ಹೋದವಂತ
ಕೇಳೀಯೇನ?
ಬಸಣ್ಣ : ನಮ್ಮಪ್ಪ ಹೆಂಗ ಸತ್ತಂತ ನನಗ ಗೊತ್ತೈತಿ.
ಗೌಡ : ಯಾಕೋ ಹುಚ್ಚಾ, ನನ್ನ ಮ್ಯಾಲ s ಸಂಶೆ ಇದ್ಧಾಂಗ ಮಾತಾಡ್ತಿ?
ಮನಸಿಗೆ ಭಾಳ ಹಚ್ಚಿಕೊಂಡೀಯಲ್ಲ, ಅದಕ್ಕ s ಹಿಂಗಾಗತೈತಿ. ಬಾಬಾ, ಒಂದ
ಬೀಡೀ ಸೇದ ಬಾ. ಬರೋಬರಿ ಬುದ್ಧಿ ಬರತೈತಿ.
ಬಸಣ್ಣ : ಒಂದ ಗಟ್ಟಿಮುಟ್ಟ ಮಾತ ಹೇಳತೇನ ಕೇಳ ಗೌಡಾ:
ನಮ್ಮಪ್ಪ ಹೆಂಗ ಸತ್ತಂತ ನನಗ ಗೊತ್ತೈತಿ; ಕಾಡ ಕಡದ ಹೆಂಗ ಹೊಲಾ
ಮಾಡಿದಾಂತ ಹೊತ್ತೈತಿ; ಆ ಹೊಲಾ ನಾ ಬಿಡಾಣಿಲ್ಲಂತ ನನಗ ಗೊತ್ತೈತಿ.
ಗೌಡ : ಇಷ್ಟ ಗೊತ್ತಿದ್ದಾವ ನಿಮ್ಮಪ್ಪ ಸಾಲಾ ಒಯ್ದಿದ್ದ,
ಗೊತ್ತೈತಿಲ್ಲೊ?
ಬಸಣ್ಣ : ತಿರಗಾಮುರಗಾ ಎರಡನೂರ ರೂಪಾಯಿ ಸಾಲ; ಇಪ್ಪತ್ತ ವರ್ಷ ಅರ್ಧಾ
ರಾಶಿ ಅಳದ ಕೊಟ್ಟಾ. ಇನ್ನ s ತೀರಿಲ್ಲ ನಿನ್ನ ಸಾಲ?
ಗೌಡ : ಹೋಗಲಿ, ಆ ಹೊಲಾ ಯಾರ ಹೆಸರಿಗಿ ಐತೆಂತ ಹೊತ್ತೈತಿ?
ಬಸಣ್ಣ : ಅದೆಲ್ಲಾ ನಂಗೊತ್ತಿಲ್ಲ. ಹೊಲಾ ನಂದು, ನಾ ಉಳತೇನ. ಇನ್ನೇಣ
ಬಾಕಿ ಉಳದಿದ್ದರೂ ನನ್ನ ಬೆನ್ನಿಗಿ ಹೇಳ.
ಗೌಡ : ಹಾಂಗಿದ್ದರ ನೀ ಹೇಳೋದೂ ನನಗ್ಗೊತ್ತಿಲ್ಲಾ. ಏಣ ಹೇಳೋದೆಲ್ಲಾ ಈ
ಬಂದೂಕಿಗೆ ಹೇಳ.
(ಬಸಣ್ಣ ಬಂದೂಕನ್ನೊದ್ದು ಹೋಗುವನು. ಗೌಡ್ತಿ ಆ ಸಮಯಕ್ಕೆ ಸರಿಯಾಗಿ ಬಂದು ನೋಡಿ ಬಸಣ್ಣ ಹೋ
ದ ಮೇಲೆ ಮಾತನಾಡುವಳು)
ಗೌಡ್ತಿ : ಕೇಳಿದೇನ?
(ದೂರದಲ್ಲಿ ಗುರ್ಯಾ ಬರುವುದನ್ನು ನೋಡಿ ಒಬ್ಬ ಮತ್ತೊಬ್ಬ ಇನ್ನೊಬ್ಬ ಮಗದೊಬ್ಬ ಎದ್ದು ಬ
ರುವರು. ಗೌಡ್ತಿ ಕೂಡಲೇ ಒಳಗೆ ಹೋಗುವಳು)
ಒಬ್ಬ : ದೇವರೂ, ಹೊರಗ ಗುರ್ಯಾ ಬಂದ ನಿಂತಾನ್ರಿ.
ಗೌಡ : ಕರಕೊಂಬಾ ಒಳಗ.
(ಗುರ್ಯಾ ಹೆದರುತ್ತ ಒಳಗಬರುತ್ತಾನೆ)
ಬಾರೊ ಗುರ್ಯಾ, ಏ ಏ ಕುರಿ ಹೆದರತೈತಿ ಹೋಗ್ರೊ
(ನಾಲ್ವರೂ ಹಿಂದೆ ಸರಿಯುವರು)
ಗುರ್ಯಾ : ದೇವರೂ ನಿನ್ನಿ ನನ್ನ ಎರಡ ಕುರಿ, ಆಳಮಕ್ಕಳು ತಿಂದರಂತ.
ಗೌಡ : ಯಾರ ಆಳಮಕ್ಕಳೋ ಮಗನ?
ಗುರ್ಯಾ : ನಿಮ್ಮ ಆಳಮಕ್ಕಳು, ಅಲ್ಲಿದ್ದಾರಲ್ಲರಿ, ಅವರ s
ಗೌಡ : ಯಾಕಲಾ ಮಗನ, ನಾಲಿಗಿ ಭಾಳ ಉದ್ದ ಬಿಡತಿ? ನಿನ್ನ ಕುರಿ ಯಾಕಡೆ
ಮೇಯಾಕ ಬಿಟ್ಟಿದ್ದಿ? ಆ ದೆವ್ವಿನ ಹೊದ ಕಡೆ ಬಿಟ್ಟಿದ್ದಿಲ್ಲಾ?
ಗುರ್ಯಾ : ಹೂನ್ರಿ.
ಗೌಡ : ಅಲ್ಲಿ ಮೇಯಾಕ ಬಿಟ್ಟಿ; ದೆವ್ವ ಬಂದ ಕುರೀ ಮುರೀತು; ನಿಮ್ಮ
ಆಳಗೊಳ ಮುರದ ತಿಂದರಂತ ಹೇಳಾಕ ಬಂದಿ, ಹೌಂದಲ್ಲ? ಮಗನ s, ಬಸಣ್ಯಾನ
ಅಪ್ಪನಂಥ ಅಪ್ಪನ s ದೆವ್ವ ಮುರೀತು. ನಿನ್ನ ಕುರೀ ಬಿಟ್ಟೀತ? ಮತ್ತ ಊರ
ತುಂಬೆಲ್ಲಾ ಸುದ್ಧಿ! ಊರಾಗ ಏನ ಸತ್ತರೂ ಇಲ್ಲಾ ಗೌಡ ಕೊಂದಿರಬೇಕು,
ಇಲ್ಲಾ ಅವನ ಆಳ ಕೊಂದಿರಬೇಕು. ಮಕ್ಕಳ್ರಾ ಊರ ಗೌಡಂದರ
ಕಿಮ್ಮತ್ತಿಲ್ಲಾ? ತಡಿ ನಿನಗ ಹೇಳತೇನ, -ಯಾರ ಕೊಂದರಂತ-
(ಬಂದೂಕು ತೆಗೆದುಕೊಳ್ಳುವನು)
ಗುರ್ಯಾ : ನಾ ಅಲ್ಲರಿ; ಹಾಂಗಂತ ಬಸಣ್ಯಾ ಹೇಳಿದ.
ಗೌಡ : ಬಸಣ್ಯಾ ಹೇಳಿದ? ಖರೆ ಹೇಳ ಮಗನ ಯಾಕ ಬಂದಿದ್ದಿ?
(ಏನು ಹೇಳುವುದಕ್ಕೂ ತೋಚದೆ)
ಯಾಕಿಲ್ಲರಿ, ಯಾಕಂದರ ನಿಮ್ಮ ಕಾಲ ತಿಕ್ಕಾಕ ಬಂದಿದ್ದೆ.
ಗೌಡ : ಹೌಂದು? ಬಾ ತಿಕ್ಕಬಾ ಹಂಗಾದರ.
(ಗುರ್ಯಾ ಹೆದರುತ್ತ ಗೌಡನ ಕಾಲು ತಿಕ್ಕುವನು)
ಗುರ್ಯಾ, ಏ ಮಗನ s ನಾ ಯಾರೋ?
ಗುರ್ಯಾ : ಊರ ಗೌಡರು.
ಗೌಡ : ನೀ ಯಾರೊ?
ಗುರ್ಯಾ : ನಿಮ್ಮ ಆಳರಿ.
ಗೌಡ : ಹೆದರಿದಿ?
ಗುರ್ಯಾ : ಇಲ್ಲರಿ.
ಗೌಡ : ಮಗನ, ಊರ ಗೌಡ ನನಗ s ಹೆದರಾಣಿಲ್ಲಾ? ಆ ಬಸಣ್ಯಾಗ ಹೆದರ್ತಿ
ಹೌಂದಲ್ಲ?
ಗುರ್ಯಾ : ಇಲ್ಲರಿ.
ಗೌಡ : ನನಗೂ ಹೆದರಾಣಿಲ್ಲ, ಬಸಣ್ಯಾಗೂ ಹೆದರಾಣಿಲ್ಲ, ಅಷ್ಟ ಪುಡಾರಿ
ಆಗಿಬಿಟ್ಟ?
ಗುರ್ಯಾ : ನಿಮಗ s ಹೆದರತೇನ್ರಿ.
ಗೌಡ : ನನಗ ಹೆದರಿದರ ಬಸಣ್ಯಾನ ಹಂತ್ಯಾಕ ಯಾಕ ಹೋಗಿದ್ದಿ?
ಬೊಗಳತೀಯಿಲ್ಲ?
ಗುರ್ಯಾ : ಬೊಗಳತೇನ್ರಿ.
ಗೌಡ : ಬಸಣ್ಯಾನ ಹಂತ್ಯಾಕ ಯಾಕ ಹೋಗಿದ್ದಿ?
ಗುರ್ಯಾ : ನಾ ಹೋಗಿದ್ದಿಲ್ಲರಿ.
ಗೌಡ : ಅವನ s ನಿನ್ನ ಹಂತ್ಯಾಕ ಬಂದಿದ್ದಾ?
ಗುರ್ಯಾ : ಹೂನ್ರಿ.
ಗೌಡ : ನೀ ಏನಂದಿ? ಅವ ಏನಂದ? ಒಂದೂ ಬಿಡದ ಹೇಳಿದಿ, ಬರೋಬರಿ.
ಇಲ್ಲದಿದ್ದರ ಮಗನ s ನಿನ್ನ ಚರ್ಮಾ ಸುಲೀತೇನ.
ಗುರ್ಯಾ : ಬಸಣ್ಯಾ ಅಂದ: ಯಾಕೊ ಗುರ್ಯಾ ಗೌಡಗ ಹೊಲಾ ಮಾರಿದೆಂತಲ್ಲೊ?
ನಾ ಅಂದೆ: ಇಲ್ಲಪಾ, ಗೌಡರು ಸಾಲಾ ಕೊಟ್ಟಿದ್ದರು. ಸಾಲದಾಗ ಹೊಲ
ಮುರಕೊಂಡರು.
ಬಸಣ್ಯಾ ಅಂದ :ಎಷ್ಟ ಸಾಲಿತ್ತು?
ನಾ ಅಂದೆ :ಮುನ್ನೂರ ರೂಪಾಯಿ ಇತ್ತು.
ಅವ ಅಂದ : ಮುನ್ನೂರ ರೂಪಾಯಿ ಸಾಲದಾಗ
ಐದ ಎಕರೆ ಜಮೀನ ಹೆಂಗ ಮಾರಿದಿ?
ನಾ ಅಂದೆ: ನನಗ ಗೊತ್ತಿಲ್ಲಪಾ.
ಗೌಡ : ನಾಯಿ ಮಗನ, ನಿನಗ ಗೊತ್ತಿಲ್ಲಾ? ಮುನ್ನೂರ ರೂಪಾಯಿ ಕೊಟ್ಟ ಎಷ್ಟ
ದಿನಾ ಆಯ್ತು?
ಗುರ್ಯಾ : ಮೂರ ನಾಕ ವರ್ಷಾಯ್ತರಿ.
ಗೌಡ : ಮೂರ ನಾಕ ವರ್ಷಾ? ತರಸಲಿ ಕಾಗದ ಪತ್ರಾ? ಹತ್ತ ವರ್ಷಾತ ಹತ್ತ!
ಗುರ್ಯಾ : ನಾ ಆಗಿನ್ನೂ ಸಣ್ಣಾವಿದ್ದೆ.
ಗೌಡ : ಸಣ್ಣಾವಿದ್ದರೆ ಹೊಟ್ಟಿಗಿ ಅನ್ನಾ ಉಣ್ಣತಿದ್ಯೊ, ಶೆಗಣಿ
ತಿನ್ನತಿದ್ಯೊ? ಬರದ ಕಾಗದ ಪತ್ರಾ ಸುಳ್ಳ ಹೇಳತಾವು? ನಿನ್
ಹೆಬ್ಬಟ್ಟಿನ ಗುರುತ ಸುಳ್ಳ ಹೇಳತೈತಿ? ದುರಗವ್ವನ ಜಾತ್ರಿ ಅಮಾಸಿಗಿ
ಒಯ್ಯಲಿಲ್ಲಾ ಹಣ?
ಗುರ್ಯಾ : ಹೌಂದ, ಅಂದ ಅಮಾಸಿ ಇತ್ತರಿ.
(ಹಿಂದೆ ಕುಳಿತ ನಾಲ್ವರೂ ಏಳುವರು)
ಗೌಡ : ಆ ಅಮಾಸಿ ಆಗಿ ಎಷ್ಟು ವರ್ಷಾದುವೋ ಮಗನ?
ಗುರ್ಯಾ : ಹತ್ತ ವರ್ಷಾದುವರಿ.
ಗೌಡ : ಹತ್ತ ವರ್ಷದ ಅಸಲಾ ಬಡ್ಡಿ ಎಷ್ಟ ಆಯ್ತು?
ಗುರ್ಯಾ : ಐದ ಎಕರೆ ಆಯ್ತರಿ.
(ಮತ್ತೆ ನಾಲ್ವರೂ ಹಿಂದೆ ಹೋಗಿ ಕೂರುವರು)
ಗೌಡ : ಹತ್ತ ಎಕರೆ ಆಗತ್ತಿತ್ತ, ಸೂಳಿಮಗನ s, ಬಡವ ನಮ್ಮ ಮನ್ಯಾಗ
ದುಡಕೊಂಡಿರ್ಲೀ ಅಂತ ಬಿಟ್ಟೇನ ಬಾ. ಭೂಮೀ ಸೀಮಿ ಆಳೋ ಗೌಡಂದರ
ಕಿಮ್ಮತ್ತಿಲ್ಲಾ? ನಾನ s ಮನಸ್ಸ ಮಾಡಿದರ ನೀ ಅಲ್ಲ, ಬಸಣ್ಯಾ ಸೈತ ಮಣ್ಣ
ಮುಕ್ಕಿ ಹೋಗತಾನ, ತಿಳೀತಿಲ್ಲ?
ಗುರ್ಯಾ : ತಿಳೀತ್ರಿ.
ಗೌಡ : ಏನ ತಿಳೀತ?
ಗುರ್ಯಾ : ಮಣ್ಣ ಮುಕ್ಕತಾನ್ರಿ.
ಗೌಡ : ಹೋಗಿ ಬಸಣ್ಯಾಗ ಹೇಳು : ಹೋದ ವರ್ಷದ ಕೋರಪಾಲ ನಿಮ್ಮಪ್ಪ
ಕೊಟ್ಟಿಲ್ಲಾ. ಕೊಡದಿದ್ದರ ಹೊಲದಾಗ ಕಾಲ ಇಡಬ್ಯಾಡಂತ ಹೇಳು.
ಗುರ್ಯಾ : ಹೂನ್ರಿ.
ಗೌಡ : ಯಾವಾಗ ಹೋಗ್ತಿ?
ಗುರ್ಯಾ : ಈಗ ಹೋಗತೇನ್ರಿ.
ಗೌಡ : ಕಾಲ ತಿಕ್ಕಿ ಹೋಗ.
(ಶಿವಿ, ಬಸ್ಸಿ ಬಂದು ಗೌಡನನ್ನು ನೋಡಿದೊಡನೆ ಮುದುಡಿಕೊಂಡು ಒಳಗೆ ಹೋಗುವರು. ಆಮೇಲೆ ನಿಂ
ಗಿ ಬಂದು ಚಪ್ಪಲಿ ಕಳೆಯುತ್ತಿರುವಳು)
ಗೌಡ : ಯಾರದೋ ಗುರ್ಯಾ ಈ ಕೋಳಿ? ಏ ಹುಡುಗಿ ನಿಲ್ಲು.
(ನಿಂಗಿ ಸೆರಗು ಮರೆಮಾಡಿ ನಿಲ್ಲುವಳು)
ಯಾರ ಮಗಳ s ನೀ?
ಗುರ್ಯಾ : ಈಕಿ ಗುರುಪಾದನ ಮಗಳ್ರಿ.
ಗೌಡ : ಭರ್ತಿ ವಯಸ್ಸಿಗಿ ಬಂದಾಳಲ್ಲೊ, ನೋಡು ಎಷ್ಟ ತುಳಕ್ಯಾಡತಾಳೊ?
ಮದಿವ್ಯಾಗಿಲ್ಲೇನ ಇನ್ನೂ?
ಗುರ್ಯಾ : ಇನ್ನೂ ಇಲ್ಲರಿ.
ಗೌಡ : ಏನ s ಹುಡಿಗಿ ನಿನ್ನ ಹೆಸರ?
ಗುರ್ಯಾ : ಗೌಡರ ಕೇಳತಾರ ಹೇಳಲ್ಲ; ಊರ ಗೌಡ ಹೆಸರ ಕೇಳೋದ ಹೆಚ್ಚೊ? ನೀ
ಹೇಳೋದ ಹೆಚ್ಚೊ?
ಗೌಡ : ಹೆದರತಾಳೋ ಏನೋ! ಅಂತೂ ನೋಡಿದವರ ಬಾಯಾಗ ನೀರ ಬರೋ ಹಾಂಗ ಮಸ್ತ
ತುಂಬಿಕೊಂಡಾಳ ಬಿಡು. ಹೆದರಿದಿ ಏನ s?
ನಿಂಗಿ : (ಸೆರಗು ಚೆಲ್ಲಿ)
ಹೆದರಾಕ ನೀ ಏನ ಹುಲಿ ಅಲ್ಲ, ಕರಡಿ ಅಲ್ಲ. ಊರ ಗೌಡ ಹೆಸರ ಕೇಳ್ಯಾನಂತ
ನನ್ನ ಬಾಯಾಗೇನೂ ಜೊಲ್ಲ ಬಂದಿಲ್ಲ ದ s ಆ s…..
(ಬಾಯಿ ತೆರೆದು ಅಣಕಿಸುವಳು)
ಗೌಡ : ಏ ಹುಚ್ಚಹುಡಿಗೀ, ಯಾರ ಜೋಡಿ ಮಾತಾಡ್ತಿ, ಕಣ್ಣ ಬರೋಬರಿ
ಕಣ್ತಾವಿಲ್ಲ?
ನಿಂಗಿ : ಕಾಣದೇನ? ಹೊರಗ ಸೂರ್ಯನ ಬೆಳಕ ಐತಿ, ನನಗೂ ಎರಡ ಕಣ್ಣಾದವು;
ಹೇಳಲಿ? ಇದ ಊರಗೌಡನ ಮಸಡಿ, ಇವು ನನ್ನ ಚಪ್ಪಲಿ.
(ಹೊರಡಲನುವಾಗುವಳು)
ಗೌಡ : ತಡಿ ಏ ಹುಡಿಗಿ, ನಿಮ್ಮಪ್ಪಗ ಹೇಳು. ಈ ಊರಾಗಿನ ಎರೀನೆಲ ಯಾವುದೂ
ನಾ ಬಿಟ್ಟಿಲ್ಲಂತ ಹೇಳು.
ನಿಂಗಿ : ಸೂರ್ಯನಂಥಾ ಸೂರ್ಯ ಮುಟ್ಟದ ಭೂಮಿ ಇದ s ಊರಾಗ ಬೇಕಾದಷ್ಟ
ಬಿದ್ದೈತಿ, ತಿಳಕೊ.
( ಹೊರಗೇ ಹೋಗುವಳು)
ಗೌಡ : ನಮ್ಮ ಮನೀಗಿ ಬಂದ ನನಗ s ಇಷ್ಟ ಧಿಮಾಕ ತೋರಿಸಿ ಹಾರಿ ಹೋಯ್ತಲ್ಲೊ
ಕೋಳಿ! ಗುರ್ಯಾ-
ಗುರ್ಯಾ : ಎಪ್ಪಾ,
ಗೌಡ : ಈಕೀನ ಮದಿವ್ಯಾಗತೀಯೇನೊ?
ಗುರ್ಯಾ : ಎಪ್ಪಾ……
ಗೌಡ : ಈಕೀನ ಮದಿವ್ಯಾಗತೀಯೇನೊ?
ಗುರ್ಯಾ : ಹೆ ಹೆ ಹೆ……
ಗೌಡ : ಮೂರು ರೂಪಾಯಿಗಿ ಈಕೀನ್ನ ಮಾರತೇನ, ತಗೊಳ್ತಿ?
ಗುರ್ಯಾ : ಹೆ ಹೆ ಹೆ…….
ಗೌಡ : ಹೋಗು, ಮಸಾಲಿ ಹಾಕು. ಹಲ್ಲಿಗಿ ರುಚಿ ಹತ್ತೋಹಾಂಗ ಪಲ್ಲೆ ಮಾಡು.
ನನ್ನ ಹೆಸರ್ಹೇಳಿ ತಿನ್ಹೋಗ, ತಿನ್ನಾಕ ಆಗದಿದ್ದರ ನನಗ ಕೊಡ, ಏನಂತಿ?
ಗುರ್ಯಾ : ಹೆ ಹೆ ಹೆ…….
ಗೌಡ : ಬಾಯ್ ಮುಚ್ಚೊ ಸೂಳಿಮಗನ. ಹಲ್ಲ ಕಿಸದರ ಹೆಣ್ಣ ಒಲೀತಾವು?
ನಿನ್ನಂಥಾ ನಾಯೀನ್ನೋಡಿ ಯಾವಾಕಿ ಬೆನ್ನ ಹತ್ಯಾಳೊ! ಬೆಳದ ನಿಂತೀ ಮಗನ s
ನಿನ್ನ ವಯಸ್ಸೆಷ್ಟ?
ಗುರ್ಯಾ : ಪಂಚವೀಸರಿ.
ಗೌಡ : ಹೆಂಗಸಿನ ಮಣಕಾಲ ನೋಡೀಯೇನ?
ಗುರ್ಯಾ : ಇಲ್ಲರಿ.
ಗೌಡ : ನಿನ್ನಂಥವಗ ಏನ ತಿಳದೀತೋ? ಗುರ್ಯಾ, ಈ ಕಾಡಕೋಳಿ ಹಿಡೀಬೇಕಲ್ಲೊ.
ಗುರ್ಯಾ : ಕಾಡಕೋಳಿ ಹೆಂಗ ಹಿಡೀಬೇಕನ್ನೋದ ನನಗ ಗೊತ್ತೈತ್ರಿ!
ಗೌಡ : ಹೌಂದು? ಹೆಂಗ ಹೇಳು?
ಗುರ್ಯಾ : ಪಂಜರದಾಗೊಂದ ಹುಂಜಿನ ಗೊಂಬಿ ಇಟ್ಟಕೋಬೇಕ್ರಿ. ಇಟ್ಟಕೊಂಡ
ಅಡಿವಿಗಿ ಹೋಗಬೇಕ್ರಿ. ಹೋಗಿ ಅಡವಿ ನಡುವ ಪಂಜರ ತೂಗಹಾಕಬೇಕ್ರಿ.
ತೂಗಹಾಕಿ ಹುಂಜಧಾಂಗ ಕು ಕೂ ಕೂ ಅಂತ ಕ್ಯಾಕಿ ಹಾಕಬೇಕ್ರಿ. ಕ್ಯಾಕಿ
ಹಾಕಿದರ ಕಾಡಕೋಳಿ ಬರತಾವರಿ. ಬಂದ ಕೂಡ್ಲೆ ಗಪ್ಪನ ಹಿಡಕೋಬೇಕ್ರಿ!
ಗೌಡ : ಇಷ್ಟಾದರೂ ತಿಳಕೊಂಡೀಯಲ್ಲ.
ಗುರ್ಯಾ : ಆದರ ನಿಮ್ಮಂಥಾ ಖರೆ ಖರೆ ಹುಂಜ ಕೂಗಿದರೂ ಕೋಳಿ ಹುಸಾ ಅಂದ
ಹೋಯ್ತಲ್ರಿ!
ಗೌಡ : ಬಾಯ್ಮುಚ್ಚ, ಏ ಮಗನ s ಬಾಯಿಲ್ಲಿ, ಕಿವಿ ಹಿಡಕೊ.
(ಗೌಡ ಹೇಳಿದಂತೇ ಗುರ್ಯಾ ಮಾಡುವನು)
ಕೂಡ್ರು, ಏಳ, ಕೂರ, ಏಳ……ಕಾಲ ತಿಕ್ಕ.
(ಗುರ್ಯಾ ಗೌಡನ ಕಾಲು ತಿಕ್ಕತೊಡಗುವನು)
ಗುರ್ಯಾ ಈ ಊರಾಗಿನ ಮಂದಿ ಯಾರಿಗಿ ಹೆಚ್ಚ ಕಿಮ್ಮತ್ತು ಕೊಡತಾರೊ?
ನನಗೂ? ಬಸಣ್ಯಾಗೊ?
ಗುರ್ಯಾ : ನಿಮಗ s ರಿ.
ಗೌಡ : ಯಾರಿಗಿ ಹೆಚ್ಚ ಹೆದರತಾರೊ?
ಗುರ್ಯಾ : ನಿಮಗ s ರಿ.
ಗೌಡ : ಖರೆ ಹೇಳ.
ಗುರ್ಯಾ : ಗಂಡಸರ ನಿಮಗ . ಹೆಂಗಸರ ಬಸಣ್ಯಾಗ .
ಗೌಡ : ಹೌಂದು? ಬಸಣ್ಯಾ ಮುಟ್ಟದ ಹೆಣ್ಣ ಯಾವುದ ಹೇಳು?
ಗುರ್ಯಾ : ಆಗಳೆ ಹೋದಳಲ್ಲರಿ.
ಗೌಡ : ಹೌಂದು? ಬಸಣ್ಯಾಗ ಏನಂತಾಳ ಆಕಿ?
ಗುರ್ಯಾ : ಅಣ್ಣಾ ಅಂತಾಳ್ರಿ.
ಗೌಡ : ಹೌಂದು? ನನಗ ಮಾಮಾ ಅಂತಾಳ ಹೋಗು. ಗುರುಪಾದ್ಯಾಗ ಹೇಳು-
ಗುರ್ಯಾ : ಹೂನ್ರಿ.
ಗೌಡ : ಏನ್ಹೇಳ್ತಿ?
ಗುರ್ಯಾ : ಗೌಡರ ನಾಲಿಗಿ ಹೊಲಸಾಗೇತಿ. ತಿನ್ನಾಕ ನಿನ್ನ ಕೋಳೀ ಕೊಡಂತ
ಹೇಳತೇನ್ರಿ,
ಗೌಡ : ನಾನೂ ಹಿಂದಿಂದ ಬರತೇನ್ನಡಿ.
(ಗುರ್ಯಾ ಹೋಗುವನು. ಗೌಡ ಬಂದೂಕು ತೆಗೆದುಕೊಳ್ಳುತ್ತಿರುವಾಗ ಗೌಡ್ತಿ ಬರುವಳು)
ಗೌಡ್ತಿ : ಯಾಕ, ಇಂದ ಎಲ್ಲಿಗಾದರು ಹೋಗ್ತಿಯೇಣ?
ಗೌಡ : ಹಾಕಿದಿ ಹೌಂದಲ್ಲ ಅಡ್ಡಬಾಯಿ? ಹೇಳಿಲ್ಲಾ ಹೊರಗ ಹೊಂಟಾಗ ಎಲ್ಲಿ,
ಯಾಕ ಕೇಳಬಾರದಂತ?
ಗೌಡ್ತಿ : ಇಂದ ರಾತ್ರೀನಾದರೂ ಮನೀಗಿ ಬರ್ತೀಯಲ್ಲ?
ಗೌಡ : ಎಲೀ ಇವಳ, ಏನ ಕರಳ ಹರದ ಬೀಳವರ್ಹಾಂಗ ಕಾಳಜೀ ಮಾಡತಾಳೊ! ಒಂದ ಬೀಡೀ
ಸೇದೋದರೊಳಗ ನಿಂದೆಲ್ಲ ಮುಗೀಬೇಕ ನೋಡ; ಕೇಳತೇನ.
(ಬೀಡಿ ಹೊತ್ತಿಸುವನು)
ಗೌಡ್ತಿ : ಇಂದ ಜೋಕುಮಾರ ಹುಣ್ಣಿವಿ, ಇಂದಿಗಿ ನಮ್ಮ ಮದಿವ್ಯಾಗಿ ಹತ್ತ
ವರ್ಷ ತುಂಬಿದುವು.
ಗೌಡ : ತುಂಬಲಿ.
ಗೌಡ್ತಿ : ಅಂದ ಹುಣ್ಣಿವೀ ದಿನ ಇಷ್ಟ ದೊಡ್ಡ ಚಂದ್ರ ಮೂಡಿದ್ದಾ.
ಗೌಡ : ಮೂಡಿದ್ದಾ.
ಗೌಡ್ತಿ : ಅಂದ ನಮ್ಮವ್ವ-ಮುಂದಿನ ಜೋಕುಮಾರ ಹುಣ್ಣಿವಿಗೆಂದರ ಈ ಮನ್ಯಾ
ಗೊಂದ ಗಂಡ ಮಗಾ ಆಡತಿರಬೇಕಪಾ ಅಳಿಯಾ-ಅಂದಿದ್ಲು.
ಗೌಡ : ಹೌಂದು? ನನಗೆ ನೆನಪ s ಇಲ್ಲ.
ಗೌಡ್ತಿ : ನಿನ್ನಿ ರಾತ್ರಿ ನನಗೊಂದು ಕನಸ ಬಿದ್ದಿತ್ತು.
ಗೌಡ : ಹೌಂದು? ಮತ್ತೇನ ಕನಸ ಕಂಡಿ?
ಗೌಡ್ತಿ : ಹುಣ್ಣಿವಿ ಚಂದ್ರ ಮೂಡಿದ್ದಾ. ನಮ್ಮ ಹೊಲದಾಗಿನ ಗಿಡದಾಗೊಂದ
ಪಂಚರಂಗಿ ಗಿಣೀ ಕುಂತಿತ್ತು. ಬೆಳದಿಂಗಳದಾಗ ಸೈತ ಅದರ ಬಣ್ಣ ಥಳ ಥಳಾ
ಹೊಳೀತಿತ್ತು. ಅಷ್ಟರಾಗ ಯಾಕೋ ಏನೋ ಎಲ್ಲಾ ಮಂದಿ ನಗಾಕ ಸುರು ಮಾಡಿದರು.
ಮ್ಯಾಲ ನೋಡಿದರ ನಮ್ಮ ಚಂದ್ರ ಸಣ್ಣ ಸಣ್ಣಾವಾಗಿ ಸವಕಳಿ ಪಾವಲಿಯಷ್ಟ s
ಕಾಣತಿದ್ದ. ನನ್ನ ನೀ ಇಷ್ಟೊಂದು ಯಾಕ ಮರತಿ?
ಗೌಡ : ಎರಡರೊಳಗ ಒಂದಂತೂ ಖರೆ : ಇಲ್ಲಾ ನಿನಗಿನ್ನೂ ಎಚ್ಚರವಾಗಿಲ್ಲಾ.
ಇಲ್ಲಾ ನಿನಗಜ್ವರ ಬಂದಿರಬೇಕು. ನಾ ನಿನಗ ಹೇಳೇನಿ, ಹೆಚ್ಚ ವಿಚಾರ
ಮಾಡಬ್ಯಾಡ, ಅಂತ. ನಿನ್ನಷ್ಟ ವಿಚಾರ ಮಾಡಿದರ ನನ್ನ ತಲ್ಯಾಗಿಷ್ಟ ಕೂದಲ
ಉಳದಾವು?
ಗೌಡ್ತಿ : ನಿನಗ ಹೆಂಗಸಿನ ತಳಮಳ ಹೆಂಗ ತಿಳೀಬೇಕು?
ಗೌಡ : ಏನ ತಿಳಿಸಿಹೇಳಲ್ಲ. ತಗೊ ಇನ್ನೊಂದ ಬೀಡೀ ಹೊತ್ತಸ್ತೇನ-ಹೇಳು.
ಗೌಡ್ತಿ : ನನ್ನ ಮಾತ ನೀ ನಡಿಸಿಕೊಡೋದ ಅಷ್ಟರಾಗ s ಐತಿ ಬಿಡ. ಪಾವಲಿ
ಚಂದ್ರನ ಹಿಂದೊಬ್ಬ ಮುದುಕ ಚೂರೀಯಂಥಾ ಕಣ್ಣ ತಕ್ಕೊಂಡ ಗಿಣೀಗೇ ಗುರಿ
ಹಿಡಕೊಂಡ ಕುಂತಿದ್ದ.
ಗೌಡ : ನೀ ಇನ್ನ s ಕನಸಿನಾಗಿಂದ ಎಚ್ಚರ s ಆಗಿಲ್ಲ. ಏ ಎಚ್ಚರಾಗ ಏಳ-
ಗೌಡ್ತಿ : ಗೊತ್ತೈತಿ ಬಿಡ. ಮದಿವ್ಯಾಗಿ ಹತ್ತ ವರ್ಷಾಯ್ತು, ಏನಾದರು
ನಡಿಸಿ ಕೊಡಂತ ಕೇಳೇನೇನ ಹೇಳು?
ಗೌಡ : ನಿನಗೇನ ಕಡಿಮಿ ಆಗೇತಿ, ಅದನಾದರೂ ಹೇಳ.
ಗೌಡ್ತಿ : ಎಲ್ಲಾ ಎಲ್ಲಾ ಐತಿ! ಹೊಟ್ಟಿ ತುಂಬ ಊಟಾ, ಮೈ ತುಂಬ ಬಟ್ಟಿ!
ಗುರಪಾದನ ಮಗಳು ಏನಂದಳು ಗೊತ್ತೈತಿ?
ಗೌಡ : ಏನಂದಳು?
ಗೌಡ್ತಿ : ಅಡವಿ ತುಂಬ ಹೊಲಾ, ಊರ ತುಂಬ ಮನೀ ಇದ್ದ, ಮನ್ಯಾಗೊಂದ
ಕೂಸಿಲ್ಲಾ ಕುನ್ನಿಲ್ಲಾ……
ಗೌಡ : ಅಂದ್ಲು? ಅದಕ್ಕೇನಾದರು ವ್ಯವಸ್ಥಾ ಮಾಡೋಣಲ್ಲ.
ಗೌಡ್ತಿ : ನನ್ನ ಮದಿವ್ಯಾಗೂವಾಗ್ಲೂ ಹಿಂಗ s ಅಂದಿದ್ದಿ!
ಗೌಡ : ಹೌಂದು? ನನಗ ನೆನಪ s ಇಲ್ಲ, ಈ ಸಲ ಮರೆಯೋದಿಲ್ಲಂತ ಆಕಿಗಿ ಹೇಳು.
ಗೌಡ್ತಿ : ಇಂದ ಜೋಕುಮಾರನ ಹುಣ್ಣಿವಿ, ಚೆಲೋ ದಿನ. ಪೂಜೆ ಮಾಡಿ ಜೋಕುಮಾರ
ಸ್ವಾಮೀನ ಪಲ್ಯ ಮಾಡಿ ತಿಂದ್ರ ಮಕ್ಕಳಾಗತಾವಂತ. ಅದಕ್ಕ ಊಟಕ್ಕ ಮನಿಗೇ
ಬರಾಕಬೇಕ ಮತ್ತ.
ಗೌಡ : ಓಹೋ! ಅದಕ್ಕ s ಹೆಂಗಸರ ಬಂದಾರೇನ ಮನೀಗಿ?
ಗೌಡ್ತಿ : ಹೂ.
ಗೌಡ : ಗುರುಪಾದನ ಮಗಳ ಅದಕ್ಕ s ಬಂದಿದ್ದಳೇನ?
ಗೌಡ್ತಿ : ಹೂ. ನೀ ಏನೋ ಅಂದೆಂತ. ಹೋದಳಂತಲ್ಲ ತಿರಿಗಿ?
ಗೌಡ : ಹೂ, ಆಕಿ ಹೆಸರೇನಂದಿ?
ಗೌಡ್ತಿ : ನಿಂಗಿ.
ಗೌಡ : ಹೂ ಆಗಲಿ, ಸಂಜೀ ಊಟಕ್ಕ ಮನೀಗೆ ಬರ್ತೇನಾಯ್ತ?
ಗೌಡ್ತಿ : ಹಾಂಗ s ಒಂದ ಗಿಣಿ ಸಿಕ್ಕರ ನೋಡತೀಯೇನ?
ಗೌಡ : ಒಂದ ಕೆಲಸಾ ಮಾಡತಿ?
ಗೌಡ್ತಿ : ಒಂದ್ಯಾಕ ಹತ್ತ ಹೇಲಲ್ಲ.
ಗೌಡ : ಹತ್ತ ಬ್ಯಾಡ, ಒಂದ s ಸಾಕ. ಮಾಡ್ತಿ.
ಗೌಡ್ತಿ : ಏನ ಹೇಳಲ್ಲ.
ಗೌಡ : ಬಾಯ್ಮುಚ್ಚಿಕೊಂಡ ಒಳಗ ಹೋಗ್ತಿ?
(ಹೊರಡುವನು. ಮೇಳದವರು ಸ್ವಾಮಿ ನಮ್ಮಯ್ ದೇವರೊ! ಢಂಢಂ ಇವರ ಹೆಸರೊ|| ಎಂದು ಹಾಡುವರು)
ಸಂಗೀತ.
ಜೋಕುಮಾರ ಸ್ವಾಮಿ (ನಾಟಕ) : ಢಂಢಂ
ದೇವರ ಸೋಲು
ಮೇಳ :
ತಿರಗತಾನ ಗೌಡ ಹಗಲಿ ರಾತ್ರಿ
ಅಂದಾನ ಅದಕ ಪಿರತಿ
ಕೋಳೀಯ ಬೆನ್ನ ಹತ್ತಿ
ನಿಂಗೀಯ ಬೆನ್ನ ಹತ್ತಿ
ಹಾಕತಾನ ಹತ್ತೆಂಟ ಬಲಿ ಹರದಾವ ಮೂಲಿ ಮೂಲಿ||
ಆರ ತಿಂಗಳ ತಿರಿಗ್ಯಾನ ಹುಂಜ ಆಗಿ
ದಿನಾ ಬೆಳಗ ಕೂಗಿ
ಬಿಟ್ಟಾನ ಹೊಲ ಮನಿ
ಮರತಾನ ನಾಚೀಕಿ
ಕೋಳಿ ಗುರಿವ್ಯಾನ ಬುಟ್ಟಿಯೊಳಗ ಹಾರಿ ಕುಂತಿತ್ತ ಬೆರಿಕಿ||
(ಈ ಹಾಡು ಹೇಳುತ್ತಿರುವಂತೆ ಗೌಡ ನಿಂಗಿಯ ಬೆನ್ನು ಹತ್ತಿ ಓಡಿಸಿಕೊಂಡು
ಬರುವುದು, ಅವಳು ತಪ್ಪಿಸಿಕೊಳ್ಳುವುದು, ರಂಗದ ಸುತ್ತ ಓಡಾಡುವುದು
ನಡೆದಿರುತ್ತದೆ.)
ಗೌಡ : ಆರ ತಿಂಗಳಾಯ್ತು, ತಪ್ಪಿಸ್ಯಾಡಿ ತಿರಿಗಿದಿ. ನಿನ್ನ ನೋಡಿದ
ದಿನಾನ s ಮಸಾಲಿ ಕೊಂಡ ಇಟ್ಟೀದೇನು, ಇಂದ ಸಿಗಬಿದ್ದೆ ನನ್ನ ಕೋಳೇ! ಇನ್ನ
ಹಟ ಹಿಡೀಬ್ಯಾಡ, ನಡಿ ಹೋಗೋಣು.
ನಿಂಗಿ : ಮಾನಗೇಡಿ, ಮಸಾಲಿ ಒಯ್ದ ನಿನ್ನ ಹೇಂತೀ ಮ್ಯಾಲ ಹಾಕಿ ನೆಕ್ಕೋ
ಹೋಗ, ಇದ s ಅನ್ನಾಣ ಅಂದಿ; ಇನ್ನೊಮ್ಮಿ ಅಂದರ ಅದ s ಮಸಾಲಿ ನಿನಗ ಹಾಕೇನ.
ಗೌಡ : ನಾ ಹೇಳೋದೂ ಅದ s ಮತ್ತ. ನನಗ ನೀ ಹಾಕು, ನಿನಗ ನಾ ಹಾಕತೇನು. ಇಂದ
ಇಲ್ಲಾ ಜೀವಂತ ನನ್ನ ಅಂಗೈಯಾಗಿರತಿ, ಇಲ್ಲಾ ಸತ್ತ ಗೋರಿಗಿ ಹೋಗಿರತಿ.
ನಿಂಗಿ : ಹೌಂದು? ಅವಯ್ಯಾ ಇವ ಎಂಥ ಶೂರ ಇದ್ದಿದ್ದಾನ? ಶೂರಾ ಮೀಸೀ
ತೀಡಕೊಳ್ಲಾ, ಮಂಡಾಗ್ಯಾವ?
ಗೌಡ : ನೀ ನನ್ನ ಅಂಗೈಯಾಗ ಬಂದಮ್ಯಾಲ ನಿನಗ ಆಡಾಕ ಇರಲೆಂತ ಹಾಂಗ s
ಬಿಟ್ಟೇನ, ಬಾ.
ನಿಂಗಿ : ಅವಯ್ಯಾ! ಇವ ಎಂಥಾ ಧೀರ ಇದ್ದಿದ್ದಾನ! ಧೀರಾ, ಬಸಣ್ಣಾ ಬಂದಾ
ದೂರ ಸರಿ.
ಗೌಡ : ಹುಚ್ಚಿ, ಎಷ್ಟಂತ ಚಾಷ್ಟಿ ಮಾಡತಿ? ನಿನಗ ಮೊದಲ s ಗೊತ್ತೈತಿ, ನಾ
ಮನಸ್ಸ ಇಟ್ಟದ್ದ ಯಾವುದೂ ಬಿಟ್ಟಿಲ್ಲಂತ. ಮತ್ತ ಓಡ್ಯಾಡಸ್ತಿ,
ಕಾಣಬಾರದ? ನಿನ್ನ ಸಲುವಾಗಿ ಮನಿಮಾರ ಬಿಟ್ಟ, ಹೊಲಾ ಬಿಟ್ಟ, ನೆಲಾ
ಬಿಟ್ಟ, ಲಜ್ಜಿಗೇಡ್ಯಾಗಿ ತಿರಗತೇನು. ಊರ ಹುಡಿಗೇರಿಗೆಲ್ಲಾ ಅದೊಂದು
ಬಸಣ್ಯಾನ ಹುಚ್ಚ. ಅವನ ಬೆನ್ನ ಹತ್ತಿ ಏನ ಸುಖ ಸುರಕೊಳ್ತಿ? ತಿನ್ನಾಕ
ಕೂಳಿಲ್ಲಾ. ನನ್ನ ಹೊಲಾ ಮಾಡಿಕೊಂಡ ಬಿದ್ದಾನ. ಅವ ಏನ ಕೊಟ್ಟಾನು? ನನ್ನ
ಬೆನ್ನ ಹತ್ತಿ ಬಾ. ಏನ ಬೇಕ ಅದನ್ನ ಬೇಡು, ಬೇಕಾದ್ದ ಬ್ಯಾಡಾದ್ದ ಉಡ,
ಉಣ್ಣ, ತೊಡ. ಬೇಕಂದರ ತಗೊ ಹಜಾರ ರೂಪಾಯಿ ಸಂಚಕಾರ! ಕೇಳಿಸ್ತು?
ನಿಂಗಿ : ಕೇಳಿಸ್ತು
ಗೌಡ : ಬಾ ಹಂಗಾರ ಬೆನ್ನ ಹತ್ತಿ.
ನಿಂಗಿ : ನಿನ್ನ ಬೆನ್ನ ಹತ್ತಿ ಬಂದರ ನಮ್ಮವ್ವಾ ನಮ್ಮಪ್ಪಾ ಏನಂದಾರು?
ಗೌಡ : ಹೇಳಿ ಕೇಳಿ ಬಡವರು. ಗೌಡನ ಮುಂದ ಏನಂದಾರು? ನನ್ನ ಬೆನ್ನ ಹತ್ತಿ
ಬಾ, ದೋ ಮಜಲ ಮನಿ ಕಟ್ಟಿಸಿಕೊಡತೇನ. ತೂಗ ಮಂಚ ಮಾಡಿಸಿ ತೂಗಾಕೊಂದ
ತೊತ್ತಾದರೂ ಇಡತೇನ. ಅದೂ ಬ್ಯಾಡಂದರ ಕಾಜಿನ ಕಪಾಟ ಮಾಡಿಸಿ ಅದರಾಗ
ಇಡತೇನ. ಬೇಕಂದರ ಒಬ್ಬ ಗಂಡನ್ನ ಮಾಡತೇನ.
ನಿಂಗಿ : ಗಂಡನ್ನ ಮಾಡತಿ? ನಿನ್ನ ಜೋಡಿ ಇದ್ದಮ್ಯಾಲ ನನ್ನ ಯಾರ
ಮಾಡಿಕೊಂಡಾರು?
ಗೌಡ : ಯಾಕ ಚಿಂತೀ ಮಾಡತಿ? ನಮ್ಮ ಗುರ್ಯಾ ಇದ್ದಾನ್ನೋಡು, ಅವಗ ನಿನ್ನ
ಮದಿವೀ ಮಾಡತೇನ. ಹೆಸರ ಗಂಡಂದಾ, ಮಸರ ನಂದಾ, ಏನಂತಿ?
ನಿಂಗಿ : ಹಂಗಾದರ ಗುರ್ಯಾ ಇಲ್ಲೇ ಇದ್ದಾನ ಕರೀಲಿ? ಗುರ್ಯಾ….
(ಗುರ್ಯಾ ಪ್ರವೇಶಿಸುವನು. ಗೌಡ ಅವನನ್ನು ನೋಡಿ ಹೆದರುವನು)
ಗುರ್ಯಾ : ಸರಣ್ರೀ ಗೌಡಪ್ಪಾ… ನೀವು ಹೀಂಗ ಹೇಳ್ತೀರಂತ ತಿಳಕೊಂಡ s ನಾ
ಈಕೀನ ಮದಿವ್ಯಾಗಾವಿದ್ದೇನ್ರಿ.
ಗೌಡ : ಏ ಸೂಳೀಮಗನ ಬಾರೋ ಇಲ್ಲಿ.
ಗುರ್ಯಾ : ಹೌಂದರಿ? ನಾ ನಮ್ಮಪ್ಪಗ ಹುಟ್ಟಿದಾವಂತ ತಿಳಕೊಂಡಿದ್ದೆ,
ನಮ್ಮಪ್ಪ ನೀವ s ಏನ್ರಿ ಮತ್ತ!
ಗೌಡ : ಯಾಕೋ ಮಗನ?
ಗುರ್ಯಾ : ಹಾ! ನಾ ಹೇಳೆದ್ದಿಲ್ರೆ, ನೀವ s ನಮ್ಮಪ್ಪಂತ? ಯಾಕ್ಕರದಿ
ಎಪ್ಪ?
ಗೌಡ : ಯಾಕೋ, ನಾಲಿಗೀ ಭಾಳ ಉದ್ದ ಬಿಡತಿ, ಈ ರಂಡಿ ಮುಂದ?
ಗುರ್ಯಾ : ಈಕಿ ರಂಡಿ ಅಲ್ಲರಿ. ನಾನ s ಈಕಿ ಗಂಡ. ಇನ್ನ s
ಮದಿವ್ಯಾಗಿಲ್ಲರಿ. ನಿಶ್ಚಯ ಎಲ್ಲಾ ಮುಗದೈತ್ರಿ.
ಗೌಡ : ನಿನಗ s ಈ ನಿಂಗಿಗೇ ಮದಿವಿ? ಯಾಕೋ, ಊರಾಗಿನ ಗಂಡಸರು ನಾವೆಲ್ಲಾ
ಸತ್ತೀವೇನೊ?
(ನಿಂಗಿ ನಗುವಳು)
ಗುರ್ಯಾ : ಯಾಕ ನಾ ಗಂಡಸಲ್ಲರಿ?
ಗೌಡ : ಏ ಲಫಂಗಾ, ಬಾಯ್ಮುಚ್ಚತೀಯೇನೊ?….
ಗುರ್ಯಾ : ಎಲೀ ಇವರ! ಸುಳ್ಳಲ್ಲರೀ, ತಡೀರಿ, ಏ ಹೇಂತೇ ಇಲ್ಲಿ ಬಾರ s.
ಗೌಡರಿಗಿ ನಮ್ಮ ಮದಿವ್ಯಾಗಿನ್ನೂ ವಿಶ್ವಾಸಾಗಿಲ್ಲಂತ; ನನ್ನ
ಕಾಲಬೀಳು.
(ನಿಂಗಿ ಗುರ್ಯಾನ ಕಾಲು ಬೀಳುವಳು)
ಮನೀತುಂಬ ಮಕ್ಕಳಾ ಹಡದು ನಗುನಗತ ಸಾಯುವಂಥವಳಾಗು-
ಗೌಡ : ನನ್ನ ಅನ್ನಾ ಉಂಡ ನನಗ s ಎದರ ಮಾತಾಡೋವಷ್ಟ ಧೈರ್ಯ ಬಂತೇನೋ
ನಿನಗ?
ಗುರ್ಯಾ : ಈ ಹೆಣ್ಣ ಭಾಳ ಕೆಟ್ಟರಿ. ಇದರ ಹಂತ್ಯಾಕಿದ್ದರ ಭಲೆ ಕೆಟ್ಟ
ಧೈರ್ಯ ಬರತೈತಿ. ಅದಕ್ಕ s ಮದಿವ್ಯಾಗತೇನ್ರಿ, ಅಲ್ಲೇನ s?
(ಇಬ್ಬರೂ ನಗುವರು)
ಗೌಡ : ನಗಬ್ಯಾಡ, ನಿನ್ನ ಸಿಗದ ಹಾಕತೇನೀಗ.
ಗುರ್ಯಾ : ಏನರೆ ಹೇಳಬೇಕಾದರ ನಾವು ಮಾತಾಡೋದ s ಇಲ್ಲರಿ. ಬರೀ ನಗತೇವ.
ನಗ್ಯಾಗ ಏನ ಬೇಕಾದ್ದ ತಿಳಸ್ತೇವ. ಈಗ ತೋರಸಲ್ರಿ?
(ಪ್ರಶಾರ್ಥಕವಾಗಿ ನಗುವನು)
ಹೌಂದರಿ? ನಾ ಈಗ ಏನ ಕೇಳಿದೆ ಅಂದರ : ಹೇಂತೇ ಗೌಡರ ಬಂದೂಕ ಹೆಂಗ
ಮಾತಾಡತೈತಿ?
(ನಿಂಗಿ ಕುಲುಕುಲು ನಗುವಳು)
ನಿಂಗಿ ಏನಂದಳಂದರ : ಮಾತಾಡೈತಂತ!
ಗೌಡ : ಮಗನ s ನಿಂಗ ಜೀವ ಬ್ಯಾಸರಾಗೇತೇನೊ?
ಗುರ್ಯಾ : ಆಗಿತ್ತರಿ. ನಿಂಗೀನ ಮದಿವ್ಯಾದರ ಬ್ಯಾಸರ ಹೋಗತೈತೇನಂತ
ಹೊಲಕ್ಕ ಹೋದೆ. ಹೊಲಕ್ಕ ಅವಳು ಬಂದಿದ್ದಳು. ನಂದೂ ನಶೀಬ ನೋಡ್ರಿ. ನೀವು
ಅರ ತಿಂಗಳಿಂದ ಬಂದೂಕ ಹಿಡಕೂಂಡ, ಚಿನ್ನ ಬೆಳ್ಳಿ ಹಿಡಕೊಂಡ ಹುಂಜಧಾಂಗ
ಕೂಗೇ ಕೂಗಿದಿರಿ. ಆಕೇನೂ ತಿರಿಗಿ ನೋಡಲಿಲ್ಲ. ನೋಡೋಣಂತ ನಾನೂ
ಹುಂಜಧಾಂಗ ಕೂಗಿದೆ. ಕೋಳಿ ಸನೇಕ ಬಂತು. ಗಪ್ಪನ ಹಿಡಕೊಂಡ ಮೈಮ್ಯಾಲ
ಕೈಯಾಡಿಸಿದರ ಹೇಳಿ ಬಿಟ್ಟಿತಲ್ಲ; ಮಾವಾ – ಅಂತ. ಅದಕ್ಕ s
ಮದಿವ್ಯಾಗತೇನ್ರಿ. ನಕ್ಕೋತ ಹೇಳ್ತೀನಂತ ಸುಳ್ಳಂದೀರಿ ಮತ್ತ. ಖರೇನ
ನಿಶ್ಚಯ ಆಗೇತ್ರಿ. ಬೇಕಂದರ ಕೇಳ್ರಿ ಬಸಣ್ಯಾನ ಅವನ s ಹಿರಿಯಾ ಆಗಿದ್ದ.
ಗೌಡ : ನನಗ ಬಸಣ್ಯಾಂದೂ ಈ ರಂಡೀದೂ ಗೊತ್ತೈತೊ.
ಗುರ್ಯಾ : ಹೌಂದರಿ? ಬಸಣ್ಣಾ ಈಗ ಆರ ತಿಂಗಳಿಂದ ನಿಮ್ಮ ಹೊಲದಾಗ s
ಮಲಗತಾನ ಗೊತ್ತೈತ್ರಿ?
ಗೌಡ : ನಾಯೀ ಮಗನ;
(ಒದೆಯ ಹೋಗುವನು. ಗುರ್ಯಾ ಅದೇ ಕಾಲು ಹಿಡಿದೆಳೆದಾಗ ಗೌಡ ಬೀಳುವನು)
ಗುರ್ಯಾ : ನಾಯೀ ಮಗಾ ನಾನೋ ನೀನೋ ಲುಚ್ಚಾ?
ನಿಂಗಿ : ಗುಂಡಾ, ಗೌಡರಿಗಿ ಹಿಂಗೆಲ್ಲಾ ಮಾತಾಡಬಾರದು.
ಗುರ್ಯಾ : ಹೌಂದಲ್ಲ! ಗೌಡರ, ಬಸಣ್ಯಾನ ಹಂತ್ಯಾಕೊಂದು ಗಿಣಿ ಇತ್ತ
ನೋಡ್ರಿ; ಅದನ್ನ ಗೌಡ್ತಿಗಿ ಕೊಟ್ಟಾನ್ರಿ. ಗೌಡ್ತಿ ಅದನ್ನೇನೋ
ನುಂಗಿದಳಂತ, ಈಗ ಮೂರ ತಿಂಗಳಿಂದ ಗೌಡ್ತಿ ಹೊಟ್ಟಿ ಹಿಂಗಾಗೇತೆಂತ!
ಅಲ್ಲೇನ ಹೇಂತೆ?
ನಿಂಗಿ : ನೋಡಿದರ ತಿಳೀತೈತಲ್ಲ.
ಗೌಡ : ಮಡಸ ನನ ಮಗನ s. ಈ ಸುದ್ದಿ ಖರೇ ಇದ್ದರ s ಬರೋಬರಿ. ಇಲ್ಲದಿದ್ದರ
ಕಣ್ಣಿರ ಸುರಿಸೇನಂದರೂ ಒಂದ ಕಣ್ಣಿಡಾಣಿಲ್ಲ ನಿನ್ನ ಮುಖದಾಗ!
ಮರೀಬ್ಯಾಡ. (ಹೋಗುವನು).
ಗುರ್ಯಾ : ಏ ಇನ್ನ s ಚಪ್ಪಾಳಿ ಹೊಡದ ನಗತೇವು: ನಡೀರಿ.
(ಇಬ್ಬರೂ ಚಪ್ಪಾಳೆ ತಟ್ಟಿ ಕುಣಿಯುವರು)
(ಸಂಗೀತ)
****
ಜೋಕುಮಾರ ಸ್ವಾಮಿ (ನಾಟಕ) : ಮೂಡಿ
ಬಾರಯ್ಯ ಗಿಣಿರಾಮಾ
ಮೇಳ :
ಮೂಡಿ ಬಾರಯ್ಯಾ ಬಾರೊ ಗಿಣಿರಾಮ||
ಮೂಡಣ ಗಾಳಿಗೆ ಸುಖಿಸಿ
ಚಂದ್ರ| ಬೆಳದಿಂಗಳೊಳು ಭರಿತನಾಗಿ
ಬಿರಿತಂಥ ಭೂಮಿಗೆ
ಚಿಗುರ ಹೂವಿನ ಚೈತ್ರ
ಬೇರೆ ನಾಡಿನ ಹಕ್ಕಿ ತಾರೊ||
ಎದಿಯೊಳಗೆ ತುಂಬ್ಯಾವ ಮಳಲಾ
ಜೋತ| ಬಿದ್ದಾವ ಒಣಗಿಡಕ ಗೂಡಾ
ಮೂರು ಸಂಜಿಯ ರಾತ್ರಿ
ಕೂಗ್ಯಾವ ಮರಿಗೂಸ
ಹೌಹಾರಿ ನಿಂತೇನ ಬಾರೊ||
(ಪಡಸಾಲೆಯಲ್ಲಿ ಗೌಡ್ತಿ, ಒಳಗಡೆ ಅಡಿಗೆ ಮನೆಯಲ್ಲಿ ಬಸ್ಸಿಯಿದ್ದಾಳೆ.
ಬಸ್ಸಿ ಒಳಗಿನಿಂದಲೇ ಮಾತಾಡುತ್ತಾಳೆ.)
ಗೌಡ್ತಿ : ಬಸ್ಸೀ-
ಬಸ್ಸಿ : ಬಂದಿನೇ ಎವ್ವ.
ಗೌಡ್ತಿ : ಲಗೂ ಬಾ. ಸುಣ್ಣದಾಗ ಎಷ್ಟಹೊತ್ತ ಕೈ ಹಾಕಿಕೊಂಡ ಕೂರತೀಯೇ?
ಬಸ್ಸಿ : ಕೈ ಒರಸಿಕೊಂಡರ ಮುಗೀತ.
ಗೌಡ್ತಿ : ಬಾ, ಇನ್ನ s ನೆಲಾ ಗುಡಿಸಬೇಕು. ಹೊಚ್ಚಲಾ ತೊಳೀಬೇಕು.
ಬಸ್ಸಿ : (ಹೊರಗೆ ಬಂದು)
ನೀ ಜಳಕಾ ಮಾಡಿದಿ?
ಗೌಡ್ತಿ : ಯಾಕ ಮಾಡಿಧಾಂಗ ಕಾಣ್ಸಾಣಿಲ್ಲಾ? ಎಷ್ಟ ಮಾಡಿದರೂ ಅಷ್ಟ s.
ಅಂಗಾಲಿನಿಂದ ನೆತ್ತೀತನಕ ನೀರಡಿಸಿಧಾಂಗ ಆಗತೈತಿ. ಗೌಡ ಬರೂದರಾಗ s
ಎಲ್ಲಾ ಮುಗೀಬೇಕ. ಶಿವೀಗಿ ಏನ ಹೇಳಿ ಕಳಿಸಿದಿ?
ಬಸ್ಸಿ : ಹೋಗು ಸೂತ್ರಧಾರನ ಹಂತ್ಯಾಕ ಜೋಕುಮಾರ ಸ್ವಾಮೀನ್ನ ಇಸಕೊಂಬಾ
ಅಂತ ಹೇಳಿ ಕಳಿಸಿದೆ.
(ಮುಂದಿನ ಮಾತು ನಡೆದಾಗ ಬಸ್ಸಿ ನೆಲ ಗುಡಿಸುವುದು, ಸಾರಿಸುವುದು,
ರಂಗವಲ್ಲಿ ಹಾಕುವುದು, ಒಲೆ ಹೂಡುವುದು ಮಾಡುತ್ತಾನೆ. ಗೌಡ್ತಿ ಆಗೀಗ
ನೆರವಾಗುತ್ತಾಳೆ.)
ಗೌಡ್ತಿ : ಬಸ್ಸೀ,
ಬಸ್ಸಿ : ಯಾಕೆವ್ವ?
ಗೌಡ್ತಿ : ಈ ಪೂಜಿ ಬರೋಬರಿ ಆದರ ಮಕ್ಕಳಾದಾವೇನ?
ಬಸ್ಸಿ : ಎವ್ವಾ ಸುಳ್ಳ ಯಾಕೆ ಹೇಳೇನು? ತೆಗ್ಗಿನ ಮನಿ ದೇವೀರಿಲ್ಲಾ?
ಗೌಡ್ತಿ : ನನ್ನ ಮದಿವೀ ದಿನಾನ s ಮದಿವ್ಯಾಗಿತ್ತು; ಅಕೀನ s ಹೌಂದಲ್ಲ?
ಬಸ್ಸಿ : ಅದ s ದೇವೀರಿ.
ಗೌಡ್ತಿ : ಆಕಿಗಿ ಮಕ್ಕಳಾಗ್ಯಾವಲ್ಲ.
ಬಸ್ಸಿ : ಹೌಂದ ಖರೆ. ಅದೂ ಒಂದ ದೊಡ್ಡ ಕತೀನ s ಎವ್ವ. ಆಕೀಗೂ ನಿನ್ಹಾಂಗ
ಭಾಳ ದಿನಾ ಮಕ್ಕಳ s ಆಗಲಿಲ್ಲಾ. ಇನ್ನೊಂದ ಮದಿವ್ಯಾಗಬೇಕಂತ ಗಂಡ
ತಯ್ಯಾರಾದ. ಅಲ್ಲಿಲ್ಲಿ ಕನ್ಯಾ ನೋಡಿ ಬಂದರು. ಒಂದ ದಿನಾ ದೇವೀರಿ
ಹೊಲಕ್ಕೆ ಬಂದ ಮಾರಿಗಿ ಸೆರಗ ಹಾಕಿಕೊಂಡ ಅಳತಿದ್ದಳು. ಯಾಕ s ಮಗಳ s
ಹಿಂಗ ಅಳತಿ?’ ಅಂದೆ. ’ಏನ ಹೇಳ್ಲೆ ಹಡದವ್ವಾ, ನನ್ನ ಗಂಡ ಇನ್ನೊಂದ
ಮದಿವ್ಯಾಗತಾನಂತ. ದೇವರ ನನ್ನ ಹಣ್ಯಾಗ ಮಕ್ಕಳಾ ಬರದಿಲ್ಲಾ’ ಅಂದ್ಲು.
ನೀ ಏನ s ಹೇಳ s ಎವ್ವಾ, ಬಂಜಿ ಯಾರಾ, ತಾಯಿ ಯಾರಾ-ನನಗ ತಿಳೀದ s ಇರತೈತಿ?
ಅಷ್ಟುದೂರ ನಿಂತರ ಇಲ್ಲಿ ಹರಗಿದ ಹೊಲಧಾಂಗ ನಾರತಿದ್ದಳ ದೇವೀರಿ!
ಗೌಡ್ತಿ : ಎದಕ್ಕೆಲ್ಲಾ ಒಂದೊಂದ ಹಂಗಾಮ ಇರತಾವ s. ಹೌಂದನ್ನೊ ಹಂಗಾಮ
ಮೀರಿದರ ಹೆಂಗ ಹೇಳು?
ಬಸ್ಸಿ : ನೀ ಏನ s ಅನ್ನು. ಸಾವಿರ ಕೊಟ್ಟರೂ ಗೌಡನ ನಡಾವಳಿ ಹೇಳಬ್ಯಾಡ
ತಗಿ. ಊರ ತುಂಬ ಹೊಲಾ ಇಟ್ಟಕೊಂಡ ಏನ ಮಾಡೋದೈತಿ? ಸತ್ತಮ್ಯಾಲ ಇದನೆಲ್ಲಾ
ಯಾರಿಗಿ ಮಾಡತಾನ ಹೇಳು, ತಿಳೀಬಾರದ?- ಮನ್ಯಾಗ ಎಳೀ ಹುಡಿಗಿ, ಹಣೀಮ್ಯಾಲ
ಕೈ ಇಟ್ಟುಕೊಂಡ ಸೋ ಅಂತ ಹಾಡಿಕೊಂಡ . ಹೇಂತೀ ಮುಖಾ ನೋಡೋ ಗೌಡಾ ಅಂದರ
ಸೂಳೇರ ಮಣಕಾಲ ನೋಡೇನು ಅಂತಾನ!
ಗೌಡ್ತಿ : ಎದಕ್ಕೆಲ್ಲಾ ದೈವಬಲಾ ಬೇಕ ಬಾ.
ಬಸ್ಸಿ : ಎವ್ವಾ, ಮೊದಲ s ನನ್ನ ಬಾಯಿ ಕಡಿಮೀದ, ಅದನ್ಯಾಕ ಮಾತಾಡಸ್ತಿ?
ಬೀಜ ಬಲಾನ s ಇಲ್ಲದಿದ್ದರ ದೈವಬಲ ಏನ ಮಾಡೀತು? ಹೆಂಗಸಿನ ಹೊಟ್ಟೀ
ಮ್ಯಾಲ ಗೆರೀ ಮೂಡಸಾಕ ತಾಕತ್ತ ಬೇಕೇನವಾ! ಬರಿ ಬಾಯ್ಲೆ ಜಬರ ಮಾಡಿದರ ಏನ
ಬಂತು? ನೋಡಬಾರದ ನನ್ನ ಗಂಡನ್ನ? ಮದಿವ್ಯಾಗಿ ಇಷ್ಟ ವರ್ಷಾಯ್ತು,- ಒಂದ
ದಿನಾ ನನಗ ಬಾರಕೋಲ ತೋರಿಸಿಲ್ಲ. ಆದರೂ ಇನ್ನ s ಅಲ್ಲಿ ಇಲ್ಲಿ
ಗಾಳಿಹೊಕ್ಕ ಬಳ್ಳೀಹಾಂಗ ನಡಗತೇನ. ಸುಳ್ಳಲ್ಲ ಎವ್ವಾ, ಅವನ ಉಚ್ಚೇ
ದಾಟಿದರ ಮುದಿಕೇರ ಸೈತ ಬಸರಾಗತಾರ!
ಗೌಡ್ತಿ : ಬೇಡಿ ಬಂದೀ ಬಾ. ಸೆರಗೊಡ್ಡಿದರ ಶಿವಾ ನನ್ನ ಉಡ್ಯಾಗ
ಕಸಬರಿಗಿ ಹಾಕಿ ಕಳಿಸ್ತಾನ.
ಬಸ್ಸಿ : ಅಷ್ಟ ಯಾಕ ಮನಸಿಗಿ ಹಳಹಳಿ ಮಾಡಿಕೊಳ್ತಿ? ಈ ಪೂಜಿ ಹುಸಿ ಹೋದರ
ನನ್ನ ಹೆಸರ ಬಸ್ಸಿ ಅಲ್ಲಾ ಅಂತ ತಿಳಿ.
ಗೌಡ್ತಿ : ಅಂಧಾಗ ದೇವೀರಿಗಿ ಏನ ಹೇಳಿದಿ?
ಬಸ್ಸಿ : ಹಾ! ದೇವೀರಿ ಕಣ್ಣೀರ ಹಾಕಿ ಅಳತಿದ್ಲು- ’ಯಾಕ ಮಗಳ s?’ ಅಂದೆ.
’ಏನ ಹೇಳ್ಲೆ ಹಡದವ್ವಾ, ನನ್ನ ಗಂಡ ನನ್ನ ಮ್ಯಾಲೊಂದ ಸವತೀನ ತರತಾನಂತ’-
ಅಂದ್ಲು. ’ಸವತೀನ ಯಾಕ ತರತಾನಂತ?’ ’ನನಗ ಬಂಜೀ ಅಂತ ಬೈಯಾಕ’ ಅಂತ್ಹೇಳಿ
ಅಳಾಕ ಸುರು ಮಾಡಿದಳು. ನಾನ s ನೋಡೇನಲ್ಲ ಎವ್ವಾ ಗಂಡಸರ ಹಂತ್ಯಾಕ ಬಂದರ
– ದೇವೀರೀ ಕಣ್ಣ, ಬಳ್ಳಿ ಎಲೀ ಹಾಂಗ ನಡಗತಾವ! ಮಕ್ಕಳಾಗಾಣಿಲ್ಲಂದರ
ಹೆಂಗ ನಂಬಲಿ?
ಗೌಡ್ತಿ : ಎಷ್ಟ ಸಲ ಹೇಳೇನಿ : ಈ ಮನೀಗಿ ಮಕ್ಕಳ ಬೇಕೋ ಗೌಡಾ-ಅಂತ.
ಹೇಳಿದಾಗೊಮ್ಮಿ ’ದಣಿದೀದಿ ಆರಾಮ ತಗೋ ಹೋಗ’ಂತಾನ. ಹಾಡಾಹಗಲಿ ಮಕ್ಕಳ
ಸೈತ ಈ ಕಡೆ ಬರಾಕ ಹೆದರತಾವ. ಮನ್ನಿ ಉಡೀತುಂಬ ಹುರಗಡ್ಲಿ ತಗೊಂಡ ಆಡೋ
ಮಕ್ಕಳ್ನ ಕರದ s ಕರದೆ. ಒಂದ s ಒಂದ ಹೊಲ್ಯಾರ ಕೂಸಾದರೂ ತಿರಿಗಿ
ನೋಡೀತೇನ! ಓಡಿ ಹೋಗೋ ಮಕ್ಕಳ್ನ ನೋಡಿ ಎದಿ ಬೆವರಿತು. ಅಂಗಳದಾಗ
ಹುರಗಡ್ಲಿ ಚೆಲ್ಲಿ ತಲೀಮ್ಯಾಲ ಕೈಹೊತ್ತ ’ಶಿವನ s ಏನ ಹೆಣ್ಣಿನ ಜನ್ಮ?’
ಅಂದೆ. ನನ್ನ ಉಸರಿನ ಜಳ ಶಿವನಿಗೆ ಎಲ್ಲಿ ತಾಗೀತ ಹೇಳು? ಅವನ ಎದ್ಯಾಗ
ಬರೀ ಕಲ್ಲ s ತುಂಬ್ಯಾವೋ ಏನೊ!
ಬಸ್ಸಿ : ನೋಡ s ಎವ್ವಾ, ನನಗ ಎಂಥಾ ಹೊಲತಿ ಅನ್ನವೊಲ್ಯಾಕ, ಮನೀ ಅಂದ
ಮ್ಯಾಲ ಕಲ ಕಲ ಸಪ್ಪಳಿರಬೇಕು, ಮಕ್ಕಳು ಅಳತಿರಬೇಕು, ತಾಯಿ, ಮಕಿಕಳಿಗಿ
ದೆವ್ವಿನ ಅಂಜಿಕಿ ಹಾಕತಿರಬೇಕು-ಅಂದರ ಚೆಂದ. ಇದೇನ ತಾಯಿ? ರಾತ್ರಿ ಈ
ಕಡೆ ಬಂದರ ಒಂದ s ಮನಿ; ಒಂದ s ದೀಪ-ಮಿಣಕ್ ಮಿಣಕ್! ಈಗ ಆರಲ್ಯೊ? ಆಗ
ಆರಲ್ಯೊ? ಶಿವನ್ನ ಕರೀಲ್ಯೊ? ಶಂಭೋ ಅನ್ನಲ್ಯೋ? ಮನ್ಯಾಗ ಮಂದಿ
ಇದ್ದಾರೊ ಇಲ್ಲೋ! ಇದ್ದವರೆಲ್ಲ ಬರೀ ನಿಟ್ಟುಸಿರನಾಗ s ಮಾತಾಡತಾರೊ!
ಗೌಡ್ತಿ : ದೇವೀರಿಗಿ ಏನ ಹೇಳದಿ?
ಬಸ್ಸಿ : ಚಿಂತೀ ಮಾಡಬ್ಯಾಡ ಮಗಳ s, ಜೋಕುಮಾರಸ್ವಾಮೀ ಪೂಜೀ ಮಾಡು ಅಂದೆ.
ಪೂಜಿ ಮಾಡಿ ಸ್ವಾಮೀನ್ನ ಮಾಡಿದಳು. ಗಂಡಗ ನೀಡಿದಳು. ತಿಂದ್ನೊ ಇಲ್ಲೊ?
ತಲೀ ಕೆಟ್ಟವರ್ಹಾಂಗ ಬಾಯಿ ತೆರಕೊಂಡ ದೇವೀರೀ ಬೆನ್ನ ಹತ್ತಿದನಲ್ಲ!
ಯಾವಾಗ ನೋಡಿದರೂ ಗಂಡ ದೇವೀರಿ ಸೀರಿ ಸೆರಗಿನಾಗ s ಇರತಿದ್ದ! ಆಮ್ಯಾಲ
ಏನ ಕೇಳ್ತಿ? ಬುದವಾರಕೊಂದ, ಶನಿವಾರಕೊಂದ ಕೂಸ s ಕೂಸ! ಹಡಿಯೋದಂದರ
ತತ್ತಿ ಇಟ್ಟಷ್ಟ ಸರಳ s ಎವ್ವಾ!
ಗೌಡ್ತಿ : ಆಕಿಗೂ ಜೋಕುಮಾರ ಸ್ವಾಮೀಂದ s ಮಕ್ಕಳಾದುವು?
ಬಸ್ಸಿ : ಜೋಕುಮಾರ ಸ್ವಾಮಿ ಸಣ್ಣ ದೇವರಲ್ಲ s ಎವ್ವಾ.
ಗೌಡ್ತಿ : ಬಸ್ಸೀ, ಯಾರಾದಾದರೂ ಮನ್ಯಾಗ ಗಿಣೀ ಐತೇನ?
ಬಸ್ಸಿ : ಗಿಣಿ? ಹಾ! ಬಸಣ್ಯಾ ಇಲ್ಲಾ ಎವ್ವಾ? ಅವನ ಹಂತ್ಯಾಕೊಂದ ಗಿಣೀ
ಐತಿ. ಭಾಳ ಚೆಂದ ಐತಿ. ಪಂಜರದಾಗಿಂದ ಬಿಟ್ಟರೂ ಹಾರಿ ಹೋಗಾಣಿಲ್ಲ,-ಅವನ
ಹೆಗಲ ಮ್ಯಾಲ s ಕುಂತಿರತೈತಿ!
ಗೌಡ್ತಿ : ಹೌಂದೇನ?
ಬಸ್ಸಿ : ಎವ್ವ, ಅದಕ್ಕ ಮಾತ ಬ್ಯಾರಿ ಕಲಿಸ್ಯಾನ. ತೊದಲಿ ತೊದಲಿ ಎಂಥಾ
ಚೆಂದ ಮಾತಾಡತೈತಿ!
ಗೌಡ್ತಿ : ಅಯ್ ಶಿವನ! ಖರೇ ಏನ?
ಬಸ್ಸಿ : ಖರೇಖರೇನ. ಊರ ಹುಡಿಗೇರೆಲ್ಲಾ ನೀರ ತರಾಕ ಹೋದಾಗೊಮ್ಮಿ ಅದನ್ನ
ಮಾತಾಡಿಸಿ ಬರತಾರ!
(ಶಿವಿ ಬರುವಳು)
ಶಿವಿ : ಕೆಲಸ ಕೆಟ್ಟಿತಲ್ಲ s ಎವ್ವ.
ಗೌಡ್ತಿ : ಯಾಕ?
ಶಿವಿ : ನಾವು ಹೋಗೋದರೊಳಗ ಹೊಲೇರ ಶಾರಿ ಹೋಗಿದ್ದಳಂತ ಆ ಸೂತ್ರಧಾರನ
ಹಂತ್ಯಾಕ. ಜೋಕುಮಾರ ಸ್ವಾಮೀನ್ನ ಇಸಕೊಂಡ ಹೋದಳಂತ.
ಗೌಡ್ತಿ : ಹಾಂಗ s ನೀ ಹೊಲಗೇರಿಗ್ಯಾಕ ಹೋಗಿ ಬರಲಿಲ್ಲ?
ಶಿವಿ : ಹೊಲಗೇರಿಗಿ ನಾ ಹೆಂಗ ಹೋಗಲಿ?
ಗೌಡ್ತಿ : ನನ್ನ ಸಲುವಾಗಿ ಹೋಗ s. ಇನ್ನೊಂದ ವರ್ಷದ ತನಕ ಸ್ವಾಮೀ
ಹೆಸರಿನಿಂದ ಹಾಂಗ s ಹೆಂಗ ಕುಂತಿರಲಿ? ನಿನಗ ಉಡೀತುಂಬ ಆಯಾರ ಮಾಡತೇನ
ಹೋಗ s.
ಶಿವಿ : ಗಂಡುಳ್ಳ ಗರತೇರ ಸೂಳಿ ಮನೀಗಿ ಹೆಂಗ ಹೋದಾರ s ಎವ್ವಾ!
ಗೌಡ್ತಿ : ಖರೆ, ತಾ ಸಾಯದ s ಸ್ವರ್ಗ ಸಿಗಾಣಿಲ್ಲಂತ. ಇಲ್ಲೇ ; ಬರತೇನ
(ಹೋಗುವಳು)
***
ಜೋಕುಮಾರ ಸ್ವಾಮಿ (ನಾಟಕ) :
ಋತುಮಾನದ ಹಕ್ಕಿ
(ಸೂಳೆ ಹೊಲೇರ ಶಾರಿಯ ಮನೆಯಂಗಳ. ಗೌಡ್ತಿ ಸೀರೆಯ ಸೆರಗಿನಿಂದ ಅಂಗಳ
ಗುಡಿಸುತ್ತ ಬರುವಳು)
ಗೌಡ್ತಿ :
ಅವ್ವಾ ಸೂಳೆವ್ವ
ತಾಯೀ ಸೂಳೆವ್ವ
ಅದಿಯೇನ ಮನಿಯಾಗ||
ಬಂಜಿ ಬಂದ ಕರಿಯತೇನ
ಕರುಣಾ ಇಲ್ಲೇಳ ನಿನಗಾ ||
ಉಟ್ಟ ಸೀರೀ ಸೆರಗಿನಿಂದ
ಗುಡಿಸೇನ ನಿನ್ನ ಅಂಗಳಾ ||
ಹೊರಗ ಬಂದ ನೋಡವ್ವ ತಾಯಿ
ನಿಂತೇನ ಬರಯಿಯುಡಿಯೊಡ್ಡಿ ||
ಶಾರಿ : ಅವಯ್ಯಾ? ಸೂಳೀಮನಿ ಅಂಗಳ ಗುಡಿಸುವಂಥಾಕಿ ಈಕಿ ಯಾರಿರಬೇಕ?
ಯಾರವ್ವ ಎಲೆ ಗೆಳತಿ
ಯಾಕವ್ವ ಬಂದಿ
ಅಂಗಳ ಗುಡಿಸುತ್ತಿ ||
ದೊಡ್ಡ ಮನೆತನದಾಕಿ
ಏ ಗುಣವಂತಿ
ಕಾಣತಿ ಮಹಾಗರತಿ ||
ಕೀಳ ಸೂಳಿಯ ಮನಿಗಿ
ಯಾಕವ್ವ ಬಂದಿ
ಕಾಣತಿ ಮಹಾಗರತಿ||
ಅವ್ವಾ, ನೋಡೋದಕ್ಕ ಮಹಾಗರತಿ. ಲಕ್ಷಣದಾಕಿ, ನೀ ಯಾರು? ಹೇಳುವಂಥ ವಳಾಗು.
ಗೌಡ್ತಿ : ತಾಯೀ-
ಶಾರಿ : ಕೀಳ ಸೂಳಿಗಿ ನಾಯೀ ಅಂತ ಕರೆಯೋದ ಬಿಟ್ಟ ತಾಯೀ ಅಂತಿ. ಯಾರವ್ವಾ
ನೀನು?
ಗೌಡ್ತಿ : ನಾನೂ ನಿನ್ಹಾಂಗ ಒಂದ ಹೆಣ್ಣಂತ ತಿಳಿ, ಸಾಕು.
ಶಾರಿ : ಹಾಂಗ ಹತ್ತಬರೆ ತಿಳದೇನು. ಅಕ್ಕಾ ಅಂದೇನು, ತಂಗೀ ಅಂದೇನು,
ಏನಂದರೇನು? ನೋಡಿದರ ಪತಿವರತಿ ಕಾಣತಿ, ಹೆಸರ ಹೇಳು.
ಗೌಡ್ತಿ : ಋತುಮಾನದ ಹಕ್ಕಿ ಬಂದ ನಿನ್ನ ಮನ್ಯಾಗ ಕುಂತೈತಿ. ಅದನ್ನ
ಕೊಟ್ಟರ ಹೆಸರ ಹೇಳೇನ್ನೋಡು.
ಶಾರಿ :ಯಾಕವ್ವಾ ಒಡಿಪಿನಾಗಾಡ್ತಿ? ಹೆಸರ ಹೇಳದ s ಎಷ್ಟೊಂದ ಓಡಾಡಸ್ತಿ?
ಋತುಮಾನದ ಹಕ್ಕಿ ಯಾವುದು, ಎಲ್ಲೈತಿ?
ಗೌಡ್ತಿ : ಮನ್ಯಾಗಿಟ್ಟಕೊಂಡ ಎಲ್ಲೆಂದರ ಏನ ಹೇಳ್ಲಿ?
ಶಾರಿ : ಒಡಪ ಹೇಳಿ ಯಾಕ ಕೊಲ್ಲತಿ? ನಿನ್ನಿಂದ ನನ್ನ ಮನಿ ಧನ್ಯಾಗೇತಿ.
ಹೆಸರ್ಹೇಳು, ಬಂದು ಕಾರಣಾ ಹೇಳು.
ಗೌಡ್ತಿ :ಅಮ್ಮಾ ನಿನ್ನ ಮನ್ಯಾಗಿನ ಜೋಕುಮಾರ ಸ್ವಾಮೀನ್ನ ಕೊಟ್ಟರ
ಹೆಸರ ಹೇಳೇನ್ನೋಡು.
ಶಾರಿ :
ಯಾವ ಸವತೀನ s ನೀನು?
ಯಾವ ಜೋಗತೀನ s ನೀನು?
ನನಗ ಸಾಯಂದೇನ?
ಗೋರಿಗಿ ಹೋಗಂದೇನ?
ಒಂದ s ಒಂದ ಗಿರಾಕಿಲ್ದ s ಕೂಳಿಲ್ದ s ನೀರಿಲ್ದ s
ಕೂತೇನು.
ಅಂಗಳಾ ಉಡಗೋ ನೆವ ಮಾಡಿ ಬಂದಿ.
ಯಾವ ಜೋಗತೀನ s ನೀನು
ಯಾವ ಸವತೀನ s ನೀನು?
ಜೋಕುಮಾರಸ್ವಾಮೀ ಪಲ್ಲೆ ಮಾಡಿ
ಊರ ಗಂಡಸರಿಗೆಲ್ಲಾ ನೀಡಿ
ನನ್ನ ಸೆರಗಿನಾಗ ಹೆಡಮುರಿ ಕಟ್ಟಿ,
ನನ್ನ ಬಾಗಲಾಗ ಬಿದ್ದಿರೋ ಹಾಂಗ ಮಾಡೇನಂದರ
ಅಂಗಳಾ ಉಡಗೋ ನೆವ ಮಾಡಿ ಬಂದಿ
ಯಾವ ಸವತೀನ s ನೀನು?
ಯಾವ ಜೋಗತೀನ s ನೀನು?
ಸೂಳಿಯಾಗಿ ಇಪ್ಪತ್ತ ವರ್ಷಾತು
ಒಂದ ಗಳಿಸಲಿಲ್ಲಾ. ಒಂದ ಉಳಿಸಲಿಲ್ಲಾ,
ಜೋಕುಮಾರಸ್ವಾಮಿ ದಯದಿಂದ
ನೇಣ ಹಾಕಿಕೊಳ್ಳಾಕ ಒಂದ ಹಗ್ಗಾನಾದರೂ
ಗಳಿಸಬೇಕಂದರ
ಅಂಗಳಾ ಉಡಗೋ ನೆವ ಮಾಡಿ ಬಂದಿ
ಯಾವ ಸವತೀನ s ನೀನು?
ಯಾವ ಜೋಗತೀನ s ನೀನು?
ಅಳೋದಕ್ಕ ಯಾರಿಗಿ ಬರಾಣಿಲ್ಲಾ?
ತತಾ ನಾಲ್ಕ ಕೊಡ. ಹಾ ಅನ್ನೋದರಾಗ
ಕಣ್ಣೀರಿನಿಂದ ತುಂಬಿಸ್ತೇನ.
ಯಾ ಊರ ಸೂಳಿ? ಯಾ ಓಣಿ ಸೂಳಿ?
ಅಂಗಳಾ ಉಡಗೋ ನೆವ ಮಾಡಿ ಬಂದಿ
ಯಾವ ಸವತೀನ s ನೀನು?
ಯಾವ ಜೋಗತೀನ s ನೀನು?
ಗೌಡ್ತಿ : ತಾಯೀ,
ಉಡಿಯೊಡ್ಡಿ ಬೇಡೇನ
ಹಿಡದೇನ ನಿನ್ನ ಚರಣ
ತೋರಿಸ ದಯ ಕರುಣಾ||
ಶಾರಿ : ಏನ ಹುಚ್ಚಿ! ಕೈಗಿ ಸಿಕ್ಕ ಜೋಕುಮಾರ ಸ್ವಾಮೀನ್ನ ಯಾವ ಹೆಣ
ಬಿಟ್ಟಾಳು? ನನಗೂ ವಯಸ್ಸಾಗೈತಿ, ಹೊಟ್ಟೀ ನೆತ್ತಿ ನೋಡಾಕ ನನಗ
ನಿನ್ಹಾಂಗ ಯಾರೂ ಹೆಣ್ಣಮಕ್ಕಳಿಲ್ಲ. ಮೊದಲ s ನನ್ನ ಮೈ ಉಂಡದ್ದ,
ಉಟ್ಟದ್ದ, ಠಸಿ ಉಂಡ ತಿರಗಿದ್ದು. ನಾರೋ ಎಣ್ಣಿಲ್ದ ಮಗ್ಗಲ
ಮಿಂಡಿಲ್ಲದ s ಮಲಗಿದ್ದಲ್ಲ. ಮಿಂಡರನೆಲ್ಲಾ ಎಳಕೊಂಬರೋ ಮಂತ್ರ
ಸಿಕ್ಕೈತಿ, ಹೆಂಗ ಕೊಡ್ಲಿ? ತಗಿ ತಗಿ ಕೊಡಾಣಿಲ್ಲ.
ಗೌಡ್ತಿ :
ಅನ್ನಬ್ಯಾಡ ಇಲ್ಲಂತ
ಉಡಿತುಂಬ ಮಗಳಂತ||
ಉಡಿಯೊಡ್ಡಿ ಬೇಡೇನ
ಹಿಡದೇನ ನಿನ್ನ ಚರಣ
ತೋರೀಸ ದಯ ಕರುಣಾ||
ಶಾರಿ : ಕರತೋ ಕರಳ ಇದ್ದಿದ್ದರ ಸೂಳಿ ಆದೇನು? ಕೈಗಿ ಬಂದ ಸೌಣಾಗ್ಯ
ಹಾದೀಲೆ ಹೋಗವರಿಗೆ ಹೆಂಗ ಕೊಟ್ಟೇನು?
ಗೌಡ್ತಿ :
ಮಕ್ಕಳಿಲ್ಲದ ಬಂಜಿ
ಬೇಡೇನ ಸೆರಗೊಡ್ಡಿ||
ಉಡಿಯೊಡ್ಡಿ ಬೇಡೇನ
ಹಿಡದೇನ ನಿನ್ನ ಚರಣ
ತೋರೀಸ ದಯ ಕರುಣಾ||
ಶಾರಿ : ಬಂಜಿ ಅಂದರ ನನಗೂ ಸಂಕಟ ಆಗತೈತಿ ಖರೆ. ಅದಕ್ಕ ನಾ ಏನ್ಮಾಡಲಿ?
ಅಂಗೈ ಐಶ್ವರ್ಯ ಹೆಂಗ ಬಿಟ್ಟೇನು? ಹುಚ್ಚಿ, ಸೂಳೀ ಮನೀಗಿ
ಬಂದಮ್ಯಾಲಾದರೂ ಹುಚ್ಚತನ ಬಿಡಬೇಕಾಗಿತ್ತ. ಹೋಗಲಿ. ಹೋಗಲಿ, ಯಾರಂತ
ಹೆಸರ್ಹೇಳಿ ಹೋಗು.
ಗೌಡ್ತಿ :
ಊರ ಗೌಡನ ಹೆಂಡತಿ
ನಾ ಊರ ಗೌಡತಿ||
ಉಡಿಯೊಡ್ಡಿ ಬೇಡೇನ
ಹಿಡದೇನ ನಿನ್ನ ಚರಣ
ತೋರೀಸ ದಯ ಕರುಣಾ||
ಶಾರಿ : ಊರಗೌಡ್ತಿ? ಏನ ಹುಚಿ ಇದ್ದೀಯ s ಎವ್ವ? ಮಾನ ಮರ್ಯಾದಿ ಬಿಟ್ಟ
ಸೂಳೀ ಮನೀಗಿ ಬಂಜೀ ಸೆರಗೊಡ್ಡಿ ಬಂದಿ. ಭಾಳದಿನಾ ಆಗಲಿಲ್ಲಾ ನಿನ್ನ
ಮದಿವ್ಯಾಗಿ?
ಗೌಡ್ತಿ : ಇಂದಿಗಿ ಹತ್ತ ವರ್ಷ ತುಂಬಿದುವು.
ಶಾರಿ : ಇನ್ನೂ ಗೌಡನ ಹೊಟ್ಯಾಗಿಂದ ತಿಳೀಲಿಲ್ಲ ಎವ್ವ? ಜೋಕುಮಾರ
ಸ್ವಾಮೀನ್ನ ಕೊಟ್ಟೇನು, ಆದರ ಗೌಡನಿಂದ ನಿನಗ ಮಕ್ಕಳಾದಾವೇನು?
ಗೌಡ್ತಿ : ಯಾಕಾಗಾಣಿಲ್ಲ? ಎಷ್ಟ ಮಂದಿಗಿ ಆಗ್ಯಾವ!
ಶಾರಿ: ಮಂದಿಗಿ ಆಗ್ಯಾವ ಖರೆ. ಗೌಡನ ಸೊಭಾವೆ ನಿನಗ ಇನ್ನೂ ಗೊತ್ತ s
ಆಗಿಲ್ಲ, ಲೋಕದಾಗಿದ್ದದ್ದೆಲ್ಲಾ ತಂದ s ಆಗಬೇಕನ್ನೋದೊಂದ ಹಂಕಾರ
ಬಿಟ್ಟರ ಅವನಲ್ಲಿ ಏನೈತಿ? ನನ್ನ s ನೋಡಲ್ಲ s ಎವ್ವ. ಇಡೀ ಆಯುಷ್ಯೆಲ್ಲಾ
ತೊಗಲ ಬಿಸಿ ಮಾಡಿಕೊಂಡ ಗಂಡಸರ ತೊಗಲಿಗಿ ತಿಕ್ಕೋದರಾಗ s ತೀರಿಹೋತ.
ಅನುಭವದ ಮಾತ ಹೇಳಲ್ಯಾ ಎವ್ವ? ಬಸಣ್ಯಾನ ನೋಡು. ಅವ ಎಲ್ಲೆಲ್ಲಿ ನೋಡತಾನ
ಅಲ್ಲಲ್ಲಿ ಹುಡಿಗೇರಿಗಿ ಬೆವರ ಬರತೈತಿ. ನಿದ್ಯಾಗ ಬಂದ ಮೈ ಒದ್ದೀ
ಮಾಡತಾನ! ಗೌಡನ್ನೋಡಿದರ ಹುಡಿಗೇರ ಬಾಯಿಗಿ ಸೆರಗ ಹಾಕ್ಕೊಂಡ ನಗತಾರ.
ಅವನಿಂದ ನಿನಗ ಮಕ್ಕಳಾಗತಾವ s? ನಾ ಹೆಂಗಸಾದ ಮೊದಲನೇ ದಿನ ತಾನ s ಮೀಸಲಾ
ಮುರೀತೇನಂತ ಗೌಡ ಬಂದ. ಚೀಲ ಬತ್ತಾ ಕೊಟ್ಟಾ, ಇಳಕಲ್ಲ ಸೀರೀ ಕೊಟ್ಟಾ,
ಕುಬಸಾ ಕೊಟ್ಟಾ, ಮ್ಯಾಳ ಐದ ರೂಪಾಯಿ ಕೊಟ್ಟ! ಪೈಲಾ ಗಿರಾಕಿ ಗೌಡ ಬಂದರ
ಸೂಳೇರಿಗೆ ಹೆಂಗ ಆಗಬ್ಯಾಡ? ಸೀರೀ ಗಂಟ ಸಡ್ಲ ಮಾಡಿಕೊಂಡ ಸಡಗರ ಮಾಡತಾ
ದೇವರ ಕ್ವಾಣಿಗಿ ಹೋದರ, -ಗೌಡ ಕಂಬಳೀ ಹೊತ್ತಕೊಂಡ ಗೊರಿಕೀ ಹೊಡಿತಿದ್ದ!
ಕಾಲ ಒತ್ತಿಕೋತ ಕುಂತೆ. ಬೆಳಿಗ್ಗೆದ್ದ ಏನೂ ಆಗದವರ್ಹಾಂಗ ಹೋದ.
ಅಂದಿಂದ ಹತ್ತ ಹದಿನೈದ ಮಂದಿ ಸೂಳೇರ ಮೀಸಲಾ ಮುರದ್ದಾನ. “ಹೆಂಗರೇ?”
ಅಂತ ಕೇಳಿದರ ಎಲ್ಲಾರೂ ನನ್ಹಾಂಗ s ಹೇಳತಾರ! ಹಿಂಗ ಯಾಕ ಮಾಡಿದಾ
ಗೊತ್ತೈತಿ ಎವ್ವ?
ಗೌಡ್ತಿ : ಸೂಳೇರ ಮನೀಗಿ ಬಂದದ್ದಕ್ಕ ಕೆಡಕನಿಸಿರಬೇಕು.
ಶಾರಿ : ದಿನಾ ಅವನ ಕಾಲ ತಿಕ್ಕತಿ, ಜಳಕಾ ಮಾಡೋವಾಗ ಬೆನ್ನ ತಿಕ್ಕತಿ.
ಅವನ ಹಿಂದ ನೋಡೀದಿ, ಮುಂದ ನೋಡೀದಿ, ಇಷ್ಟೆಲ್ಲಾ ನೋಡಿ ಮತ್ತ s ಅವನ್ನ
ಪ್ರೀತೀ ಮಾಡೇನಂತಿ,-ನೀನೂ ದೊಡ್ಡ ಗರತಿ ಬಿಡು. ಯಾಕ ಹಾಂಗ ಮಾಡಿದಂದರ-
ಕೂಡಲಿ ಬಿಡಲಿ, ಅವ ಮೀಸಲಾ ಮುರದ ಸೂಳೇರ ಮಕ್ಕಳೆಲ್ಲಾ ಅವನ ಮಕ್ಕಳ s
ಆಗತಾರೇನವಾ. ಹಾಂಗ ತಿಳಕೊಂಡ s ಗೌಡ ಊರ ಮಂದಿಗೆಲ್ಲಾ ’ಏ ಮಗನ s’ ಅಂತ
ಕರೀತಾನ. ಇಂಥಾ ಗೌಡನಿಂದ ನಿನಗ ಮಕ್ಕಳಾಗತಾವು?
ಗೌಡ್ತಿ : ಜೋಕುಮಾರ ಸ್ವಾಮೀ ದಯದಿಂದ ಯಾಕ ಆಗಬಾರದು?
ಶಾರಿ : ಜೋಕುಮಾರ ಸ್ವಾಮೀನಂತೂ ತಗೊಂಡ್ಹೋಗು. ಆದರ ಸೂಳೀ ಹೊಚ್ಚಲಾ
ಮೆಟ್ಟೀದಿ ಅಂದಮ್ಯಾಲ ಇನ್ನಾದರೂ ಶಾಣ್ಯಾಳಾಗಿ ಬದುಕು.
ಗೌಡ್ತಿ : ತಾಯೀ, ನಿನ್ನ ಉಪಕಾರ ಹೆಂಗ ತೀರಿಸಲಿ? ನಿನ್ನ ಬಾಯಿಂದ ಒಂದ
ಸಲ ಹೇಳು,- ನನಗ ಮಕ್ಕಳಾಗತಾವಂತ.
ಶಾರಿ : ನಿನಗ ಮಕ್ಕಳಾಗತಾವ ಹೋಗು.
(ಗೌಡ್ತಿಯ ತಲೆಯ ಮೇಲೆ ಜೋಕುಮಾರ ಸ್ವಾಮಿಯ ಬುಟ್ಟಿ ಹೊರಿಸುವಳು. ಗೌಡ್ತಿ ಹೊರಡುವಳು.)
***
ಜೋಕುಮಾರ ಸ್ವಾಮಿ (ನಾಟಕ) : ಡೊಳ್ಳ
ಹೊಟ್ಟಿ ಉರುಳಿಬಿತ್ತೊ
(ರಸ್ತೆ . ಬಸಣ್ಣ ಗುರ್ಯಾ ಭೆಟ್ಟಿಯಾಗುವರು)
ಬಸಣ್ಣ : ಮಿತ್ರಾ ಗುರಣ್ಣಾ, ರಾಮೇರಾಮಪಾ ರಾಮೇರಾಮ.
ಗುರ್ಯಾ : ಮಿತ್ರಾ ಬಸಣ್ಣಾ, ರಾಮೇರಾಮಪಾ ರಾಮೇರಾಮ.
ಬಸಣ್ಣ : ಮಿತ್ರಾ ಗುರಣ್ಣಾ, ನಿನ್ನ ಮುಖಾ ಯಾಕ ಬಾಡೇತಿ? ಹೇಳಬೇಕಾದೀತ
ನೋಡು.
ಗುರ್ಯಾ : ಮಿತ್ರಾ ಬಸಣ್ಣಾ, ಏನ್ಹೇಳಲಿ? ಬಡತನ ಶಾಪ ಹೌಂದೋ ಅಲ್ಲೊ, ವರಾ
ಅಂತೂ ಅಲ್ಲಪಾ.
ಬಸಣ್ಣ : ಯಾಕೋ ಮಿತ್ರಾ, ಎಂದೂ ಇಷ್ಟ ನೊಂದ ಆಡಿದಾವಲ್ಲ. ಇಂದ ಆಡತಿ
ಅಂದಮ್ಯಾಲ ಏನ ಕಾರಣ ಹೇಳು.
ಗುರ್ಯಾ : ಮಾರಾಯಾ, ಇಂದ ಗೌಡನ ಕೈಯಾಗ ಸಿಕ್ಕಿದ್ದೆ! ನಾ ನಿನ್ನ
ಹಂತ್ಯಾಕ ಬಂದದ್ದ ಅಧೆಂಗ ಗೊತ್ತಾಗೇತ್ಯೊ! ಒದ್ದ ಬೆನ್ನ ಹಣ್ಣ ಮಾಡಾಕ
ಬಂದಿದ್ದ.
ಬಸಣ್ಣ :ಅಂಜಾಕ ನೀ ಇಷ್ಟ ತಯಾರಿದ್ದರ ಯಾರ ಒದ್ಯಾಣಿಲ್ಲ ಹೇಳು?
ಹಾಕ್ಯಾನಿಲ್ಲ ನಿನ್ನ ಹೊಲಕ್ಕ ಬಲಿ?
ಗುರ್ಯಾ : ಹಾಕೋದೇನ ಬಂತು? ಆ ಹೊಲ ಈಗ ಅವನ ಹೆಸರಿಗೇ ಆಗೇತಂತ. ಗೌಡಗೊಂದ
ದೊಡ್ಡ ಹೊಟ್ಟಿ ಐತೇನಪಾ. ಯಾವತ್ತು ಆ ಹೊಟ್ಯಾಗಿಂದ s ಮಾತಾಡತಾನ ಅವ.
ನಾವ ಹೇಳಿದ್ದ ಅದಕ್ಕ ಕೇಳಿಸೋದ s ಇಲ್ಲ. ಯಾಕಂದರ ಅದಕ್ಕ ಕಿವೀನ s ಇಲ್ಲ.
ಬಸಣ್ಣ : ಏನ ಎಬಡೊ! ಕೈಯಾಗಿನ ಹೊಲಾ ಕಾಣಾ ಕಾಣಾ ಕಳಕೊಳ್ತಿಯಲ್ಲೊ? ಹೊಸ
ಹೊಸ ಕಾಯ್ದೆ ಕಾನೂನ ಬಂದಾವಂತ ಹೇಳಬೇಕಿಲ್ಲ?
ಗುರ್ಯಾ : ಸಾಲಗಾರರಿಗಿ ಬಾಯಿ ಬರಾಣಿಲ್ಲೋ ಎಪ್ಪಾ!
ಬಸಣ್ಣ : ಹೆದರಬ್ಯಾಡ. ಅಧೆಂಗ ಹೊಲಾ ಕಸೀತಾನ ನಾ ನೋಡತೇನ.
ಗುರ್ಯಾ : ಇಂದೇನ ಮಜಾ ಆಯ್ತೊ ಬಸಣ್ಣಾ! ಗೌಡ ಗುರುಪಾದನ ಮಗಳು ನಿಂಗೀನ
ನೋಡಿ ಬಾಯಿ ತಗದಿದ್ದಾ ತಗದಿದ್ದಾ ತಗದಿದ್ದಾ! ನಿಂಗಿ ಏನ ಮಾಡಿದಳಂದಿ?
ಬಸಣ್ಣ : ಮಿತ್ರಾ ಏನ ಮಾಡಿದ್ಲು?
ಗುರ್ಯಾ :ಥೂ ಥೂ ಥೂ ಅಂತ ಮೂರಬರೆ ಉಗಳಿ ಹೋದಳಲ್ಲೊ!
ಬಸಣ್ಣ : ಹಾಂಗಿರಬೇಕ ಇದ್ದರ.
ಗುರ್ಯಾ : ನಿಂಗಿ ಹಂತ್ಯಾಕಿದ್ದರ ಇಷ್ಟ ಧೈರ್ಯ ಬರತೈತಿ ಹುಡುಗಾ!
ಬಸಣ್ಣ : ಮದಿವ್ಯಾಗತೀಯೇನ?
ಮೇಳ :
ಸ್ವಾಮಿ ನಮ್ಮಯ್ ದೇವರೊ
ಢಂ ಢಂ ಇವರ ಹೆಸರೊ||
(ಗೌಡ ತನ್ನ ನಾಲ್ಕು ಜನರ ಪರಿವಾರದೊಂದಿಗೆ ಬರುವನು)
ಗೌಡ : ಯಾಕೋ ಗುರ್ಯಾ, ಇನ್ನೂ ಎಲ್ಲೇ ನಿಂತೀದಿ? ಅಂಧಾಂಗ ಇವ ಯಾರ, ಏನಿವನ
ಹೆಸರ? ಎಲ್ಯೊ ನೋಡಿಧಾಂಗಿತ್ತಲ್ಲೊ!
ಬಸಣ್ಣ : ನನ್ನ ಹೆಸರ ಬೇಕ? ಒಡಪ ಹಾಕಿ ಹೇಳಲೊ? ಹಾಂಗ s ಹೇಳಲೊ?
ಒಬ್ಬ : ಇವನ s ಬಸಣ್ಯಾರೀ.
(ಗೌಡ ಅವನನ್ನು ಸುಮ್ಮನಿರಿಸಿ ಮೂಲೆಯಲ್ಲಿ ನಿಂತಿರಲು ನಾಲ್ವರಿಗೂ ಸೂಚಿಸುತ್ತಾನೆ)
ಗೌಡ : ಓಹೊ ಇವನ s ಅಲ್ಲಾ ಬಸಣ್ಣಂದರ? ಗುರ್ಯಾ, ನಾ ಹೇಳಿದ್ದ ಹೇಳಿದೆಯೋ
ಇಲ್ಲೊ?
ಗುರ್ಯಾ : ಹೇಳಿಲ್ಲರಿ, ಹೇಳತೇನ್ರಿ. ಬಸಣ್ಣಾ ನಿಮ್ಮಪ್ಪ ದೆವ್ವಿನ
ಹೊಲದ ಕೋರ ಪಾಲ ಕೊಟ್ಟಿಲ್ಲಂತ….
ಬಸಣ್ಣ : ಯಾವನ ಹೊಲಾ? ಏನ ಮಾತು? ಹುಸಾಹುಸಾ. ಬೈಲಕಡೆ ಬರೋಬರಿ
ಆಗಿಲ್ಲೇನ, ಬಾಯಿಗಿ ಬಂಧಾಂಗ ಆಡತಿ? ಯಾವನು ಉಳತಾನ ಅವನ s ಭೂಮಿ ಮಾಲಕ
ಅಂತ ಕಾಯ್ದೆ ಬಂದಾವ, ಹೇಳವಗ.
ಗೌಡ : ಎಲ ಎಲಾ? ಭಾರಿ ವಕೀಲಪಾ! ಗುರ್ಯಾನ ವಕೀಲಕಿ ನೀನ s ಹಿಡಿದ್ದೀ
ಯಂತಲ್ಲ? ಕೇಸ ಗೆಲ್ಲಸಬೇಕಪಾ ಮತ್ತ.
ಬಸಣ್ಣ : ಅದನ್ನ ನೀ ಹೇಳಬೇಕ s ನನಗ?
ಗೌಡ : ಒಂದ ಮಾತ ತಿಳಕೊ, ನಾ ಇದ್ದೀನಂತ ನೀವೆಲ್ಲ ಬದಕೀರಿ. ಹೌಂದಲ್ಲರೊ?
ನಾಲ್ವರೊ : ಹೌಂದ ಹೌಂದರಿ. ಹೌಂದ ಹೌಂದರಿ.
ಬಸಣ್ಣ : ಹೌಂದ ಹೌಂದೋ ನನ್ನ ಪರಮೇಶ್ವರಾ, ನಾವು ಬದಕಿದ್ದ s ನಿನ್ನ
ದಯದಿಂದ! ಅಲ್ಲ?
ಗೌಡ : ಯಾರ ದಯದಿಂದ ಬದಕೀರಿ ತೋರಸ್ಲಿ? ಗುರ್ಯಾ,
ಗುರ್ಯಾ : ಓ ಎಪ್ಪಾ
ಗೌಡ : ಸೊಲ್ಪ ಬಗ್ಗಿ ನಿಲ್ಲೊ.
(ಗುರ್ಯಾ ಬಗ್ಗುವನು. ಗೌಡ ಅವನ ಮೇಲೆ ಕೂಡ್ರುವನು)
ನೀ ಯಾರ ದಯದಿಂದ ಬದಕೀಯೋ ಮಗನ?
ಗುರ್ಯಾ : ಎಪ್ಪಾ, ನಿಮ್ಮ ದಯಂದಿಂದರಿ.
ಗೌಡ : ಅದನ್ನವನಿಗೆ ಹೇಳು.
ಗುರ್ಯಾ: ಬಸಣ್ಣಾ. ನಾ ಗೌಡನ ದಯದಿಂದ ಬದಕೀನೋ.
ಬಸಣ್ಣ : ಹೊ ಹೊ ಹೊ ಹೊ! ಹೌಂದ ಹೌಂದೋ ಗೌಡಾ, ಮೊದಮೊದಲ ದೇವರೂ ಹಿಂಗ s
ಹೇಳತಿದ್ದಾ: ಮಕ್ಕಳ್ರಾ ನೀವೆಲ್ಲ ನನ್ನ ದಯದಿಂದ ಬದಕೀರಿ- ಅಂತ. ಅದರ
ಮನ್ನಿ ದೇವಸ್ಥಾನದೊಳಗಿನ ದೇವರ s ಕಳವಾಗ್ಯಾವ, ಗೊತ್ತಿಲ್ಲಾ?
ಗೌಡ : ಕದ್ದವರ ಮುಕಳಿ ಕಡೀತಾವ. ಏನ ಮಾಡ್ಯಾರ ಮಕ್ಕಳು?
ಬಸಣ್ಣ : ಛೇ ಛೇ ಹಂಗೇನಿರಾಕಿಲ್ಲ ತಗಿ.
ಗೌಡ : ಹೌಂದು? ತಡಿ ನಿನಗೂ ಖಾತ್ರಿ ಮಾಡತೇನ. ಇಂದಿನಿಂದ ನೀ ಊಳೋ ಹೊಲ
ನಂದು. ಇನ್ನ ಅಲ್ಲಿ ಕಾಲಿಟ್ಟರ ಆ ಕಾಲ ನಿನ್ನುವಲ್ಲಂತ ತಿಳಿ.
ಬಸಣ್ಣ : ಗೌಡಾ ಒಂದ ಮಾತ ಹೇಳಲಿ?
ಗೌಡ : ಏನ ಹೇಳೋದೆಲ್ಲಾ ಈ ಬಂದೂಕಿಗಿ ಹೇಳಿಕೊ. ನಾ ಅದಕ್ಕೂ ಮಾತ
ಕಲಿಸೇನಿ. ಬಂದೂಕ ಏನೇನ ಮಾತಾಡತೈತ್ರೊ?
ನಾಲ್ವರೂ : ಢಂಢಂ ಅಂತೈತ್ರಿ.
ಬಸಣ್ಣ : ನನ್ನ ಹಂತ್ಯಾಕೊಂದ ಬಂದೂಕೈತಿ. ಆದರ ನಾ ಗುಂಡು
ಹಾಕಿದವರೆಲ್ಲಾ ಸಾಯೋದರ ಬದಲ ಮರಿ ಹಾಕಂತಾರ! ಹಹ್ಹಹ್ಹ-ನಿಂಗಿ
ಹೇಳಿತಿದ್ಲು ; ನಿನ್ನ ತಲ್ಯಾಗ ಬಿಳೀ ಕೂದಲ ಬಂದಾವಂತ; ಹೌಂದು ಗೌಡಾ?
ಗೌಡ : ತೋರಸಲಿ? ತಾರೋ ಬಂದೂಕ.
(ಬಂದೂಕು ಇಸಿದುಕೊಳ್ಳುವನು. ಬಸಣ್ಣ ಬಂದೂಕಿನ ತುದಿಗೆ ಕಿವಿ ಹಚ್ಚಿ)
ಬಸಣ್ಣ : ನೋಡೋಣು, ಏನೇನ ಮಾತಾಡತೈತಿ! ಏನೂ ಕೇಳಸ s ವೊಲ್ದಲ್ಲ!
(ಬಂದೂಕು ಕಸಿದೆಸೆಯುವನು)
ಹೋಗಲೇ ಬಡಿವರ ಬಸೆಟ್ಟಿ. ಹೊಲದಾಗ ಕಾಲಿಟ್ಟರ ಕಾಲ ಮುರೀತಾನಂತ. ನಿನ್ನ
ಕಾಲಿಂದೇನ ಕಾಳಜೀನ s ಇಲ್ಲೇನ ನಿನಗ? ರಟ್ಟೀ ಮುರದ, ಹೊಟ್ಟೀ ಕಟ್ಟಿ
ನಮ್ಮಪ್ಪನು, ನಾನು ಕಾಡ ಕಡದ್ದೇವ. ಮಂದಿ ದೆವ್ವಿನ ಹೊಲಾ ಅಂತ ಹಗಲಿ
ಆಕಡೆ ಹೋಗಾಕ ಹೆದರತ್ತಿದ್ದರು. ಹಗಲಿ ರಾತ್ರಿ ಅಲ್ಲೇ ಬಿದ್ದಿರತಿದ್ದ
ನಮ್ಮಪ್ಪ. ಇಂದ ಬಂದಾನ ಹೊಲಾ ತಂದಂತ.
ಗೌಡ : ಅಜ್ಜಾ ಆರತೆಲಿ, ಮುತ್ಯಾ ಮೂರತೆಲಿ ಗೌಡಿಕಿ ನಮ್ಮದು; ನಿಮ್ಮಪ್ಪ
ಬರದ ಬಟ್ಟ ಒತ್ತಿಕೊಟ್ಟಾನ, ಹೊಲ ನಮ್ಮದು; ಇಂದ ಬಂದೀ ಬದಲ ಮಾಡಾಕ!
ಬೇಕಾದ್ದ ಕಾಯ್ದೆ ಬರಲಿ, ಕಾನೂನ ಬರಲಿ, ದುಡ್ಡಿದ್ದಾವ ಯಾವತ್ತೂ
ದೊಡ್ಡಾವಂತ ತಿಳಕೊ. ಮೂರಲ್ಲ ಆರದುಡ್ಡ ಕೊಟ್ಟರ ನಿನ್ನ ಕಾಯ್ದೆ ಕಾನೂನ
ನನ್ನ ಕಿಸೇದಾಗ ಬಿದ್ದಾಡತಾವ. ನಾಕ ರೂಪಾಯಿ ಕೊಡತೇನ ನನ್ನ ಬಂದೂಕ
ಹೊರಾಕ ಬರತಿ?
ಬಸಣ್ಣ : ಥೇಟ ಗಂಡಸರ್ಹಾಂಗ ಮಾತಾಡ್ತಿಯಲ್ಲೊ ಗೌಡಾ! ದೊಡ್ಡ ದೊಡ್ಡ
ರಾಜರ s ಹಜಾಮರಾಗಿ ಮಂದೀನ ಬೋಳಸತಾರ; ನೀ ಇನ್ನ s ನಿನ್ನ ಧಿಮಾಕ
ಬಿಟ್ಟಿಲ್ಲಲ್ಲ! ತೋರಸಲೇನ ನನ್ನ ಕೈ?
(ಕೈಯೇರಿಸಿ ಗುರ್ಯಾನೆದುರು ಕುಳಿತು)
ಗುರ್ಯಾ, ಏಳಮಗನ ಕಿತ್ತಕೊಂಡ. ಬೇಕಾದ್ದಾಗಲಿ ನಾ ನಿನ್ನ ಬೆನ್ನ
ಮ್ಯಾಲಿರತೇನ, ಏಳೊ.
ಗೌಡ : ನಾಯಿಗಿ ತಾ ಯಾರ ಮನಿ ನಾಯಂತ ಗೊತ್ತಿರೋದಿಲ್ಲೇನೋ? ?
ನಾಲ್ವರು: ಹೌಂದ ಹೌಂದರಿ.
ಒಬ್ಬ : ಒಂದಷ್ಟ ಒರಟ ಜಾತೀ ನಾಯಿಗೆ ಮನಿ ನೆನಪ s ಇರಾಣಿಲ್ಲರಿ. ಯಾರ ಕೂಳ
ಹಾಕತಾರ ಅವರ ಮನ್ಯಾಗ s ಬಿದ್ದಿರತಾವರಿ.
ಬಸಣ್ಣ : ನೋಡೋ, ಅವನ ಮನಿ ನಾಯಾಗಿ ಬೀಳತೀಯೇನೊ? ನಾ ಹುಲಿಯಂಥಾವ
ಇದ್ದೇನೇಳೊ ನೋಡಿಕೊಳ್ಳಾಕ.
ಒಬ್ಬ : ನಮ್ಮ ಢಂಢಂ ದೇವರು ಇಲ್ಲೀತನಕ ಒಟ್ಟ ಎಷ್ಟ ಹುಲಿ ಕೊಂದಾರ?
ಇನ್ನೊಬ್ಬ : ಹನ್ನೊಂದ.
ಮತ್ತೊಬ್ಬ : ಇನ್ನ s ಒಂದ ಡಜನ್ ಪೂರಾ ಆಗಿಲ್ಲಲ್ಲೊ.
ಬಸಣ್ಣ : ಗುರ್ಯಾ, ಏಳೋ, ನಿಂಗಿಯಂಥಾ ನಿಂಗಿ ಹುಸಾ ಅಂದಳಂತಿ ಗೌಡಗ; ನೀ
ಗಂಡಸಾಗಿ ಬಿದ್ದೀಯಲ್ಲೊ? ಏಳೊ.
(ಗುರ್ಯಾ ಕಿತ್ತುಕೊಂಡೇಳುವನು. ಗೌಡ ಬೀಳವನು. ನಾಲ್ವರೂ ಹೌಹಾರಿ ಹಾಡು ಮುಗಿಯುವತನಕ ಇದ್
ದ ಭಂಗಿಯಲ್ಲೆ ನಿಶ್ಚಲರಾಗಿರುತ್ತಾರೆ. ಮೇಳ ಹಾಡುತ್ತಿರುವಾಗ ಬರಬರುತ್ತ ಗುರ್ಯಾ ಕುಣಿಯ
ತೊಡಗುವನು)
ಮೇಳ :
ಡೊಳ್ಳ ಹೊಟ್ಟಿ ಉರುಳಿಬಿತ್ತೊ ಭೂಮಿಮ್ಯಾಗ
ತೇಲಗಣ್ಣ ಮೇಲಗಣ್ಣ
ಮೆತ್ತೀಕೊಂಡೀತಪ್ಪ ಮಣ್ಣ ಮೀಸೀ ಒಳಗ||
ಸಲಿಗೀನಾಯಿ ಬೆನ್ನ ಏರಿ ಆಳೇನಂತಿತ್ತೊ
ಭೂಮಿ ಸೀಮಿ ತಂದ s ಅಂತಿತ್ತೊ
ಚಿತ್ತಪಟ್ಟ ಧಡಂಧುಡಿಕಿ ಅಂಗಾತ ಬಿತ್ತೊ||
(ಹಾಡು ಮುಗಿದೊಡನೆ ಆ ನಾಲ್ವರೂ ಬಂದು ಗೌಡನನ್ನು ಎತ್ತುತ್ತಾರೆ. ಒಬ್ಬ ತಾನೇ ಗುರ್ಯಾನಂ
ತೆ ಬಗ್ಗುತ್ತಾನೆ. ಗೌಡ ಅವನ ಮೇಲೆ ಕೂತಾಗ ಉಳಿದವರು ಗೌಡನನ್ನು ಉಪಚರಿಸುತ್ತಾರೆ.)
ಗೌಡ : ಹಲಕಟ್ಟ ನಾಯಿಗೊಳ್ರಾ. ಬಡವರಂತ ಸಡಲ ಬಿಟ್ಟರ ತಲೀಗಿ ಏರಿ
ಬಿಟ್ಟಿರಿ? ಗುರ್ಯಾ; ಈ ಕಡೆ ಬರತೀನೊ?…..
ಬಸಣ್ಣ : ಸುತ್ತಮುತ್ತ ನಾಯಿ ಇದ್ದರ ಗೌಡಗ ಎಷ್ಟ ಧೈರ್ಯ ಬರತೈತಿ
ನೋಡೋ….
ಗೌಡ : ಇವನ್ಯಾವ ನೊಣಾನೊ, ನೊರಜನೋ-ಇವನ್ನಷ್ಟ ಮಾತಾಡಸರ್ಯೊ.
ಒಬ್ಬ : ಯಾಕ ಬಸಣ್ಣ, ಇನ್ನೂ ನಿಮ್ಮಪ್ಪನ ಗೋರಿ ಆರಿಲ್ಲಾ, ಇಷ್ಟರಾಗ ಜೀವ
ಬ್ಯಾಸರಾಯ್ತು?
ಬಸಣ್ಣ : ಹೂ ಹೂ, ಜೀವ ಬ್ಯಾಸರಾಗಿ ಯಾರಾದರೂ ನಿಮ್ಮಂಥಾ ಶೂರರು ಕೊಂದರ
ಸಾಯಬೇಕಂತ ಕುಂತೇನ. ನಾ ಒಬ್ಬ s ಏನ, ಊರಾಗಿನ ಬಡವರೆಲ್ಲಾ ಕುಂತಾರ.
ಗೌಡ : ಬಿಡಾಡಿ ನಾಯಿ ತಿರಕೊಂಡ ತಿನ್ನಲೀ ಅಂತ ಬಿಟ್ಟರ ಭಾಳಾಯ್ತಪಾ
ನಿನ್ನ ಅದ್ದೂರಿ.
ಬಸಣ್ಣ : ಗೌಡಾ, ಬಾಯಾಗಿನ ಹಲ್ಲ ಮೊದಲ ಎಣಿಸಿಕೊಂಡ ಮಾತಾಡ.
ಗೌಡ : ಇನ್ನ s ಎಳಕಿದ್ದೀ, ತಿರಿಗ್ಯಾಡಿ ಸೊಕ್ಕಲೀ ಅಂತ ಕೈಕಾರದ ಭಾಳ
ಮಾತಾಡ್ತೀ ಯಲ್ಲೋ, ಲಗಾಸರೋ ಮಗನ್ನ.
(ನಾಲ್ವರೂ ಬಸಣ್ಣನ ಮೇಲೆ ಏರಿ ಹೋಗುವರು. ಗುರ್ಯಾ ಹೆದರಿ ಚೀರುತ್ತ ಓಡುವನು)
ಗುರ್ಯಾ : ಅಯ್ಯೋ ಬರ್ಯೋ, ಗೌಡ ಬಸಣ್ಣನ ಕೊಲ್ಲತಾನ ಬರ್ಯೋ….
(ಹೋಗುವನು)
ಗೌಡ : ಏ ಏ ಮಕ್ಕಳ್ರಾ, ಗುರ್ಯಾ ಮಂದೀನ ಕರಕೊಂಡ ಬರತಾನ ಹಿಂದ ….
(ನಾಲ್ವರೂ ಹಿಂದೆ ಸರಿಯುತ್ತಾರೆ. ಬಸಣ್ಣ ಸೆಡ್ಡು ಹೊಡೆದು)
ಬಸಣ್ಣ : ಖರೇ ಗಂಡಸಿದ್ದರ ನಾಯೀನ ಕಳಸಬ್ಯಾಡ. ನೀ ಬಾ. ಕೈಗಿ ಕೈ ಹತ್ತಿ
ಆಮ್ಯಾಲ ನೋಡ ನನ್ನ ಕುವ್ವತ್ತು. ಅದೆಲ್ಲ ನಮ್ಮಪ್ಪನ ಕೊಂಧಾಂಗಂತ
ತಿಳದೀಯೇನ?
ಗೌಡ : ಅದ್ಯಾಕೋ ಬರೀ ಗಂಡಸ್ತನದ ಮಾತ s ಮಾತಾಡ್ತಿ; ಗಂಡಸರದೊಂದ ಶರ್ತ
ಹೇಳಲೇನ?
ಬಸಣ್ಣ : ಹೇಳ.
ಗೌಡ : (ಜೇಬಿನಲ್ಲಿಯ ಎಲೆಯಡಿಕೆ ಕೊಡುತ್ತ)
ಹೊಲಾ ನಂದೋ ನಿಂದೋ ಅನ್ನೋದಿಂದ ಖಾತ್ರಿ ಆಗಿಹೋಗಲಿ. ನನಗೂ ತಿಳೀಲಿ,
ಇಂದ ಜೋಕುಮಾರ ಹುಣ್ಣಿವಿ. ಆ ಹೊಲದಾಗ ಬೆಳತನಕ ಯಾರ ಮಲಗತಾರ-ಹೊಲ
ಅವರದು. ತಯಾರಿದ್ದೀಯೇನ? ತಯಾರಿದ್ದರ ಹಿಡಿ ವೀಳ್ಯ.
ಒಬ್ಬ : ನೋಡಪಾ, ಮೊದಲ s ಹುಣ್ಣಿವಿ. ದೆವ್ವಾ ಭೂತಾ ಭಾಳ. ನಿಮ್ಮಪ್ಪ
ಎಲ್ಲಿ ಸತ್ತಂತ ನೆನಪ ಮಾಡಿಕೊ, ಹಿಡಿ.
ಇನ್ನೊಬ್ಬ : ಆ ಯೋಳ ಮಕ್ಕಳ ತಾಯಿ ಕತಿ ಗೊತ್ತೈತಿಲ್ಲೊ ಮತ್ತ?
ಬಸಣ್ಣ : ತಾ ಯಾರಿದ್ದೇನ.
(ವೀಳ್ಯ ತಕ್ಕೊಂಡು ಹೋಗುವನು. ಗೌಡ ಒಬ್ಬನನ್ನು ಕರೆದು ಹೇಳುವನು)
ಗೌಡ : ನೀ ನಮ್ಮ ಮನೀಗಿ ಹೋಗು. ಊಟಾ ಕಂಬಳಿ ತಗೊಂಬಾ. ಕೇಳಿದರ ದೆವ್ವಿನ
ಹೊಲಕ್ಕ ಮಲಗಾಕ ಹೋಗ್ಯಾರಂತ ಹೇಳು. ಎಲ್ಲಾರೂ ಕೂಡಿ ಹೊಲಕ್ಕ ಮಲಗಾಕ
ಹೋಗ್ರಿ; ಕೆಲಸ ಮುಗಸ್ರಿ. ಅದ s ಊಟಾ ನೀವು ಮಾಡ್ತಿ; ನಾ ಶಾರೀ ಮನ್ಯಾಗ
ಇರತೇನು, ಬಂದ ಹೇಳ್ರಿ, ತಿಳೀತಿಲ್ಲ?
ಒಬ್ಬ : ಹೂನ್ರಿ.
(ಸಂಗೀತ)
ಜೋಕುಮಾರ ಸ್ವಾಮಿ (ನಾಟಕ) : ಕಡದಾರೊ
ಸ್ವಾಮೀನ
(ಹೊಲ, ಗುಡಿಸಲ, ಬಸಣ್ಯಾ ಕೂತಿದ್ದಾನೆ. ಗೌಡ್ತಿ ಓಡುತ್ತ ಬರುತ್ತಾಳೆ.)
ಬಸಣ್ಣ : ಬಾ ಬಾರ s ನನ ಗೆಣತಿ, ಎಷ್ಟ ಹೊತ್ತ ಹಾದಿ ನೋಡಿದೆ…
ಗೌಡ್ತಿ : ಬಸಣ್ಯಾ-
ಬಸಣ್ಣ : ಯಾಕ?
ಗೌಡ್ತಿ : ಗೌಡಗ ನಮ್ಮ ಸುದ್ದಿ ಎಲ್ಲಾ ಗೊತ್ತಾಗೇತಿ.
ಬಸಣ್ಣ : ಆದರ ಆಗಲೇಳು, ಅದಕ್ಯಾಕ ಚಿಂತೀ ಮಾಡತಿ? ಬಂದ ನನ್ನ
ಮನ್ಯಾಗಿದ್ದೀಯಂತ.
ಗೌಡ್ತಿ : ಗೌಡ ನಿನ್ನ ಬಿಟ್ಟಾನು?
ಬಸಣ್ಣ : ಹುಚ್ಚೀ, ಹಾದ್ಯಾನ ನಾಯಿ ಬೊಗಳಿದರ, ಹಾರ್ಯಾಡೋ ನೊಣದ ರೆಕ್ಕಿ
ಬಡದರ, ಸಾಯತೇನಂತ ತಿಳದ್ದೀಯೇನ? ಗೊತ್ತಾದರ ಆಗಲಿ, ನಿನ್ನ ಗಂಡನ
ಪುಂಡತನ ನನಗ ಗೊತ್ತಿಲ್ಲಾ? ಒಂದ s ಗುಟರ್ ಹಾಕಿದರ ಬಂದೂಕ ಚೆಲ್ಲಿ ಓಡಿ
ಹೋಗತಾನ.
ಗೌಡ್ತಿ : ನಿನ್ನಿ ನನಗ ಕನಸೇನ ಬಿದ್ದಿತ್ತ ಗೊತ್ತೈತಿ?
ಬಸಣ್ಣ : ಏನ ಬಿದ್ದಿತ್ತು?
ಗೌಡ್ತಿ : ಕನಸಿನಾಗೊಂದ ಅಡಿವ್ಯಾಗಿತ್ತು. ಅಡಿವ್ಯಾಗೊಂದ ಗವೀ ಇತ್ತು.
ನಿನ್ನ ಬಿರಸ ಎದಿ ನನ್ನ ಮತ್ತಾನ ಎದ್ಯಾಗ ಮೂಡಿಧಾಂಗ, ಮಿರಗ ಮೋಡದೊಳಗ
ಮಿಮಚ ಹರದಾಡಿಧಾಂಗ, ಬಿದರಿನೊಳಗ ಬಿರಗಾಳಿ ತುಂಬಿಧಾಂಗ ಅನ್ನಿಸಿ,
ಗವ್ಯಾಗಿಂದ ನೀ ’ಏ ಹುಡಿಗೀ’ ಅಂತ ಕರಧಾಂಗಾಯ್ತು. ಅಷ್ಟರಾಗ ಒಂದ ಒಣ ಒಡಕ
ಬಿದರ ಗೂಗೀ ಹಾಂಗ ಸಿಳ್ಳ ಹಾಕಿದ್ದ ಕೇಳಿಸ್ತು. ಎಚ್ಚರಾದಾಗ ಗೌಡ
ಸಿಳ್ಳ ಹಾಕ್ಕೊಂಡ ಹೊರಗ ಅಡ್ಡಾಡತಿದ್ದಾ. ಬಸಣ್ಯಾ, ಇದ s ನಮ್ಮ ಕಡೀ
ಭೇಟಿ ಆಯ್ತಲ್ಲೊ!
ಬಸಣ್ಣ : ಛೇ ಛೇ, ನೀ ಭಾರಿ ಹೆದರವಾಕಿ ಬಿಡ.
ಗೌಡ್ತಿ : ದಿನಾ ನಾ ಹೇಳಿದ್ದ ಎಷ್ಟ ಚಂದ ಕೇಳತಿದ್ದಿ. ಇಂದ್ಯಾಕ ನನ್ನ
ನಂಬವೊಲ್ಲಿ? ದಿನಾ ರಾತ್ರಿ ಬೆಳಗಿ ಬೆಳಗಿ ಈ ಮಣ್ಣ ಸೇರಿ ಬೆಳಗಿದಿ.
ಕಾಣಾ ಕಾಣಾ ಇಂದ ನನ್ನ ಕಣ್ಣಿದಿರಿಗೇ ನೀ ಮುಣಗೋದನ್ನ ಹೆಂಗ ನೋಡಲಿ?
ಅವರೆಲ್ಲಾ ಇಂದ ನಿನ್ನ ಕೊಲ್ಲಬೇಕಂತ ಮಲಸತ್ತ ಮಾಡ್ಯಾರ. ಐನೂರ ಮಂದಿ
ಚಂಡಾಲರನ್ನ ಕೂಡಿಕೊಂಡ ಗೌಡ ಇಂದ ಕಡ್ಯಾಕ ಬರತಾನು. ಲಗು ತಪ್ಪಿಸಿಕೊಂಡ
ಓಡೇಳು.
ಬಸಣ್ಣ : ಅಯ್ಯಯ್ಯಯ್ಯ! ಐನೂರ ಮಂದಿ ಚಂಡಾಲರ? ಬರಲಿ ಬಿಡ. ಅವರಷ್ಟ s ಏನೂ
ತಾಯೀ ಹಾಲ ಕುಡದವರಲ್ಲಾ, ನಾ ಏನೂ ನಾಯೀ ಹಾಲ ಕುಡದ ಬೆಳದಿಲ್ಲಾ. ನೀ ಹಾ
ಅನ್ನೋದರಾಗ ಅವರ ಮೀಸಿಗೆಲ್ಲಾ ಮಣ್ಣ ಹಚ್ಚಿ ಕಳಸ್ತೇನ.
ಗೌಡ್ತಿ : ಅಯ್ಯೋ! ನೀ ಕೆಡಿಸಿದ ಗರತೇರ ಗಂಡರೆಲ್ಲಾ ಕೂಡಿ, ರಂಡೇರ
ಮಿಂಡರೆಲ್ಲಾ ಕೂಡಿ ಬರತಾರಂತ ಏಳೊ, ನನ್ನ ಮಾತ ಕೇಳೊ.
ಬಸಣ್ಣ : ಬರಲಿ, ಬರಲಿ, ಅವರ ಹೆಂಡರೆಲ್ಲಾ ನನ್ನ ಮೈ ರುಚಿ ನೋಡ್ಯಾರ.
ಇವರು ನನ್ನ ಕೈ ರುಚೀನಾದರೂ ನೋಡಲಿ.
ಗೌಡ್ತಿ : ಬಸಣ್ಯಾ, ದೂರ ಕೊಳ್ಳೀ ಬೆಳಕ ಕಂಡ್ಹಾಂಗಾತು ಲಗು ಏಳು.
ಬಸಣ್ಣ : ಅದ s? ಕೊಳ್ಳೀದೆವ್ವ ಬಿಡ. ದಿನಾ ಈ ಹುಣಿಸೀ ಮರಕ್ಕ ಆರತೀ
ಬೆಳಗಾಕ ಬರತಾವ.
ಗೌಡ್ತಿ : ಅಯ್ಯೋ, ನಾ ಹೆಂಗ ಹೇಳಿದರ ನನ್ನ ಮಾತ ನಂಬೀಯೋ? ಬಸಣ್ಣಾ ಇದು
ವಾದ ಮಾಡೋ ಯಾಳೇ ಅಲ್ಲ.
ಬಸಣ್ಣ : ಅವರಿಲ್ಲಿ ಬಂದರೂ ನಾ ಇಲ್ಲೇ ಇರಾವ. ಧೈರ್ಯ ಆಗದಿದ್ದರ ನಿ
ನಡಿ.
ಗೌಡ್ತಿ : ಅಯ್ಯೋ ಬಸಣ್ಯಾ ! ಮಾಡಲ್ಹೆಂಗಾ
ಮಾಡಲ್ಹೆಂಗಾ ಗೌಡಾ ಕಡಿಯ ಬಂದಾ||
ಪುಂಡ ಚೆಂಡಾಲರ ಕೈಯಾಗ ಕುಡಗೋಲ
ಕಡದ ಬಿಡತೇವಂತ ಮಾಡ್ಯಾರ ಹುಯ್ಯಾಲಾ
ಮಾಡಲ್ಹೆಂಗಾ| ಗೌಡಾ ಕಡಿಯ ಬಂದಾ||
ಅಡವಿ ಆರ್ಯಾಣದಾಗ ಅತ್ತ ಕರಿಯವರಿಲ್ಲಾ
ಬಾಳ s ಗೊಡಸದ ಮಂದಿ ಬುದ್ಧಿ ಹೇಳವರಿಲ್ಲಾ
ಮಾಡಲ್ಹೆಂಗಾ| ಗೌಡಾ ಕಡಿಯ ಬಂದಾ||
(ದೂರದಿಂದ ಕಿರುಚುವಿಕೆ ಕೇಳಿಸುತ್ತದೆ)
ಬಸಣ್ಯಾ, ಕಣ್ಣ ತೆರೆದ ನೋಡೋ, ಕೊಳ್ಳಿದೆವ್ವಲ್ಲ, ಕೊಲೆಗಡುಕರೋ ಅವರು!
ಹೆಂಗ ನೋಡೊ! ಅವರು ಐನೂರ ಮಂದಿ, ನೀ ಒಬ್ಬ ಎದಕ್ಕ ಈಡಾದಿ?
ಬಸಣ್ಣ : ಹೌಂದಲ್ಲ. ನೋಡು, ಈ ಕಡೆ ಕೊಳ್ಳಿ ಕಾಣಸೋದಿಲ್ಲ. ಓಡು-
ಗೌಡ್ತಿ : ನಿನ್ನ ಬಿಟ್ಟ ಹೆಂಗ ಹೋಗಲಿ?
ಬಸಣ್ಣ : ಮಾತಾಡೊ ಗಿಣಿ ಇದ್ದಲ್ಲಿ ನಾ ಮತ್ತ ಬಂದ s ಬರತೇನ ಓಡಿಹೋಗು.
ಗೌಡ್ತಿ : ಓಡಿದರ ಇಬ್ಬರೂ ಕೂಡಿ ಓಡೋಣು. ಹೋದರ ನನ್ನ ಜೀವಾನೂ ನಿನ್ನ
ಜೋಡಿ ಹೋಗಲಿ
ಬಸಣ್ಣ : ನಮ್ಮಿಬ್ಬರ ಜೀವಕ್ಕಿಂತ ಗಿಣೀ ಜೀವ ದೊಡ್ಡದಲ್ಲೇನ? ಓಡಿ ಗಿಣೀ
ಜೀವಾ ಉಳಿಸೋದ ಬಿಟ್ಟೀದಿ, ಏನೇನೋ ವಾದ ಮಾಡ್ತಿ. ಗಿಣಿ ಇದ್ದಲ್ಲಿ ನಾ
ಇದ್ದ s ಇರತೇನ.
ಗೌಡ್ತಿ : ಓಡಂದಿ?
ಬಸಣ್ಣ : ಲಗು.
ಗೌಡ್ತಿ : ನೀ?
ಬಸಣ್ಣ : ಮತ್ತದ s ಹಾಡ್ತಿ.
ಗೌಡ್ತಿ : ಓಡಲಿ?
ಬಸಣ್ಣ : ಲಗು ಓಡು.
(ಗೌಡ್ತಿ ಓಡುವಳು. ಅವಳು ಹೋದ ದಿಕ್ಕನ್ನೇ ತುಸು ಹೊತ್ತು ನೋಡಿ)
ಹುಚ್ಚ ಹುಡುಗಿ, ನನ್ನ ಹೊಟ್ಯಾಗಿನ ನನ್ನ s ಮರತಾಳ!
(ಸುತ್ತ ನೋಡಿ ಗಿಡಕ್ಕೆ ತೂಗು ಹಾಕಿದ್ದ ಕುಡಗೋಲು ತೆಗೆದುಕೊಳ್ಳುವನು.
ಧೈರ್ಯದಿಂದ ಮುನ್ನುಗ್ಗುವಷ್ಟರಲ್ಲಿ ಅವನು
ನುಗ್ಗಿದಲ್ಲೆಲ್ಲಕೊಳ್ಳಿ, ಕುಡಗೋಲು ಹಿಡಿದವರು
ಕಾಣಿಸಿಕೊಳ್ಳುತ್ತಾರೆ. ಬಂದೂಕು ಹಿಡಿದ ಗೌಡ ಕಾಣಿಸಿಕೊಳ್ಳುತ್ತಾನೆ.
ಬಸಣ್ಣ ಗಾಬರಿಯಾಗಿದ್ದರೂ ಧೈರ್ಯ ತಂದುಕೊಂಡು ಮಾತನಾಡುತ್ತಾನೆ.)
ಏನ ಗೌಡರು, ಹೊಲದ ಕಡೆ ಬಂದಿರಿ?
(ಎಂದು ಹೇಳುತ್ತಿರುವಂತೆಯೇ ಒಬ್ಬ ಹಿಂದಿನಿಂದ ಬಂದು ಗೌಡನ
ಸೂಚನೆಯಂತೆ ಏಟು ಹಾಕುತ್ತಾನೆ. ಬಸಣ್ಯಾ ಮೂರ್ಛೆ ಬೀಲುತ್ತಾನೆ.
ಎಲ್ಲರೂ ಕಿರುಚುತ್ತ ಕೊರಡಿನಂತೆ ಅವನನ್ನು ಹೊತ್ತು ಹಾಡುತ್ತ
ನರ್ತಿಸುತ್ತಾರೆ.)
ಎಲ್ಲರು :
ಊರ ಪುಂಡ ಮಿಂಡನ ಮಗನ ಕಡಿ ಕಡಿ
ಹಿಂಗ ಗೌಡ್ತಿ ಕರದಾಳೊ ಬಸಣ್ಯಾ ನಡಿ ನಡಿ||
ಮಾತಾಡೊ ಗಿಣಿ ತೋರಿ
ಹುಡಿಗೇರನೆಳೆದವನ||
ಮಲಗಿದ್ದ ಹೊಲ ಎಲ್ಲ
ತಂದಂತ ಅಂದವನ||
ಒಂದ s ಏಟಿಗೆ ಇವನ
ನಾಕೆಂಟ ಮಾಡೋಣ||
ಹದ್ದೀಗಿ ಹಾಕೋಣ
ಕೆಸರ ಮಣ್ಣ ಮಾಡೋಣ||
(ಹಾಡು ಮುಗಿದ ಮೇಲೆ ಹಾಗೇ ಕೆಳಕ್ಕೆ ಚೆಲ್ಲಿ, ಬಂದೂಕಿನಿಂದ ಗೌಡ
ಬಸಣ್ಯಾನನ್ನು ಇರಿಯುತ್ತಾನೆ. ಬಸಣ್ಣಾ ’ಆ s’ ಎಂದು ಕಿರುಚಿದಾಗ
ರಂಗವೆಲ್ಲ ಸ್ತಬ್ಧವಾಗುತ್ತದೆ. ಸ್ವಲ್ಪ ಹೊತ್ತಾದ ಮೇಲೆ
ಸ್ತಬ್ಧತೆಯೊಳಗಿಂದ ಸೂತ್ರಧಾರನ ಧ್ವನಿ ಕೇಳಿಬರುತ್ತದೆ.)
ಮೇಳ :
ಎಣಿಸಿ ಐನೂರ್ಮಂದಿ ಅವರಿಗಿ ಸಾವಿರ ಕೈಗಳು
ಹಿಡದ ಕಡದಾರೊ ಎಳೀದೇವರನ್ನಾ||
ಸಾವಿರ ಕೈಗಳು ಕೈಗೊಂದ ಕೊಡಲಿ ಕುಡುಗೋಲು
ಹೊಡದ ಕೊಂದಾರೊ ಎಳೀದೇವರನ್ನಾ||
ಕೊಂದಾರೆ ಒಗೆದಾರೊ ಸ್ವಾಮಿನ ಕಡದಾರೆ ಒಗೆದಾರೊ
ನೆತ್ತರ ಹರದಾವೊ ಹೊಳಿ ಹಳ್ಳ ತುಂಬಿ||
ನೆತ್ತರ ಬಿದ್ದಲ್ಲಿ ಆಹಾ ಬೆಳಿಗಳು ಎದ್ದಾವೊ
ಮಣ್ಣು ಮಣ್ಣೆಲ್ಲಾ ಹಸಿಹಸರ ತುಂಬಿ||
ಒಳ್ಳೆಯ ಸರಕಾರ ನಮ್ಮ ದೇಶಾವನಾಳಲಿ
ಮನಿ ಮನಿ ತುಂಬಲಿ ಆಡೋ ಮಕ್ಕಳಿಂದ||
ಹೊಲ ಊಳೋ ರೈತ ಅವನೆ ಹೊಲದೊಡೆಯನಾಗಲಿ
ದೇಶ ತುಂಬಲಿ ಧನಧಾನ್ಯದಿಂದ||
ಸುವ್ವೀ ಬಾ ಸುಂದರಾ ಸ್ವಾಮೀ
ಸುವ್ವೀ ಬಾ ಚಂದಿರಾ
ಸುವ್ವೀ ಬಾರಯ್ಯಾ ಜೋಕುಮಾರ ಸ್ವಾಮಿ||
ಮಂಗಲಂ